ಕಲಬುರಗಿ: ಮಹಾವಿಷ್ಣುವಿನ 8ನೇ ಅವತಾರವೇ ಶ್ರೀ ಕೃಷ್ಣ ಪರಮಾತ್ಮ. ದುಷ್ಟ ಕಂಸ ಹಾಗೂ ಕೌರವರ ವಿನಾಶ, ಪಾಂಡವರ ರಕ್ಷಣೆ ಮತ್ತು ಧರ್ಮ ಸಂಸ್ಥಾಪನೆಗಾಗಿ ಕೃಷ್ಣ ಅವತಾರ ತಾಳಿದ ಎಂದು ಜೈವೀರ ಹನುಮಾನ ದೇವಸ್ಥಾನದ ವಿನೂತ ಜೋಶಿ ಹೇಳಿದರು.
ಕರುಣೇಶ್ವರ ನಗರದ ಜೈ ವೀರ ಹನುಮಾನ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಗುರುವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷ್ಣನು ಭಗವದ್ಗೀತೆಯಲ್ಲಿ ಜೀವನದ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡಿದ್ದೇನೆ. ಸಜ್ಜನರ ರಕ್ಷಣೆ ಹಾಗೂ ಧರ್ಮ ಸಂಸ್ಥಾಪನೆಗಾಗಿ ಯುಗ ಯುಗಗಳಲ್ಲೂ ಅವತರಿಸುವ ಭರವಸೆಯನ್ನು ನೀಡಿ ಶ್ರೀ ಕೃಷ್ಣ ಅವತಾರ ಸಮಾಪ್ತಿಗೊಳಿಸಿದನು ಎಂದರು.
ಜೈವೀರ ಹನುಮಾನ ದೇವಸ್ಥಾನದ ಅಧ್ಯಕ್ಷ ಅವಿನಾಶ ಕುಲಕರ್ಣಿ ರೇವೂರ ಮಾತನಾಡಿ, ಹಿಂದೆಲ್ಲ ಶಾಲಾ ಪಠ್ಯದಲ್ಲಿ ರಾಮಾಯಣ, ಮಹಾಭಾರತದಂತಹ ಧಾರ್ಮಿಕ ಶಿಕ್ಷಣ ಇರುತ್ತಿತ್ತು. ಆದರೆ ಇಂದಿನ ಪಠ್ಯದಲ್ಲಿ ನೈತಿಕ, ಧಾರ್ಮಿಕ ಶಿಕ್ಷಣ ಮಾಯವಾಗಿದೆ. ಹೀಗಾಗಿ ನಾವೆಲ್ಲರೂ ಮನೆಯಲ್ಲಿ ನಿತ್ಯ ಭಗವದ್ಗೀತೆ ಶ್ಲೋಕ ಪಠಿಸಬೇಕು. ಮಕ್ಕಳಿಗೂ ಸನಾತನ ಧರ್ಮದ ಬಗ್ಗೆ ತಿಳಿಸಿ ಹೇಳಬೇಕು ಎಂದು ಸಲಹೆ ನೀಡಿದರು.
ಪ್ರಮುಖರಾದ ಕಿಶನರಾವ ಮಟಮಾರಿ, ರಾಘವೇಂದ್ರ ಕುಲಕರ್ಣಿ, ವಿಜಯಕುಮಾರ ಕುಲಕರ್ಣಿ, ಕಿಶನರಾವ ಕುಲಕರ್ಣಿ, ಶಂಕರರಾವ ಸಿಂದಗಿಕರ, ಮುರಳಿಧರರಾವ ಕುಲಕರ್ಣಿ, ಶಾಮರಾವ ಕುಲಕರ್ಣಿ, ವಿಶ್ವಾಸ ಮೊಘೇಕರ, ಋಷಿಕೇಶ ಚೌಡಾಪುರ, ಗುಂಡು ಕುಲಕರ್ಣಿ, ಪ್ರವೀಣ್ ಓಂಕಾರ, ಸಮೀರ್ ದೇಶಪಾಂಡೆ, ರಾಕೇಶ ಕುಲಕರ್ಣಿ, ಪದ್ಮಜಾ ಜಮಖಂಡಿ, ಹೇಮಾ ಚೌಡಾಪುರಕರ, ವಿನೀತಾ ಕುಲಕರ್ಣಿ, ಹೇಮಾ ರೇವೂರ, ಮಾಲಿನಿ ಮಟಮಾರಿ, ಶೋಭಾ ಕುಲಕರ್ಣಿ ಇತರರಿದ್ದರು.
ಬಡಾವಣೆ ಮಹಿಳೆಯರು ಶ್ರೀ ಕೃಷ್ಣನ ಭಜನೆ ಮಾಡಿ, ತೊಟ್ಟಿಲೋತ್ಸವ ನೆರವೇರಿಸಿದರು. ರಘೋತ್ತಮಾಚಾರ ಅವರಿಂದ ಸಂಕಲ್ಪ, ಶ್ರೀ ಕೃಷ್ಣನಿಗೆ ಅರ್ಗ್ಯ ಪ್ರಧಾನ, ನೈವೇದ್ಯ, ಮಂಗಳಾರತಿ ಜರುಗಿದವು.