ಜಿಲ್ಲೆ

ಕಲಬುರಗಿ ಜಿಪಂ ಕಚೇರಿಗೆ ಬೆಂಕಿ ದಾಖಲೆಗಳು ಭಸ್ಮ

ಕಲಬುರಗಿ: ನಗರದ ಜಗತ್ ವೃತ್ತದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಶುಕ್ರವಾರ ತಡರಾತ್ರಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಹಲವು ಮಹತ್ವದ ದಾಖಲೆಗಳು,  ಕಡತಗಳು, ಪೀಠೋಪಕರಣಗಳು,  ಕಂಪ್ಯೂಟರ್ ಇನ್ನಿತರ ವಸ್ತುಗಳು ಸುಟ್ಟು ಹೋಗಿವೆ. ಅವಘಡದಿಂದಾಗಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.
ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಕಚೇರಿ ಇರುವ ಮುಖ್ಯ ಕಟ್ಟಡದಲ್ಲಿಯೇ ಬೆಂಕಿ ಅವಘಡ ಸಂಭವಿಸಿದೆ. ಅದರ ಹಿಂಭಾಗದ ಜಲಶಕ್ತಿ ಭವನ ಮತ್ತು ಇನ್ನಿತರ ವಿಭಾಗಗಳಲ್ಲಿ ಬೆಂಕಿ ಅವರಿಸಿಕೊಂಡು ಎಲ್ಲಡೆ ಧಗದಗಿಸಿದೆ. ಬೆಂಕಿಯಲ್ಲಿ ಬೆಂದು ಒಂದು ಭಾಗದ ಛಾವಣಿ ಕುಸಿದು ಬಿದ್ದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದೆ. ಅಲ್ಲದೆ ಒಮ್ಮೆಲೆ ಬೆಂಕಿ ಹೊತ್ತಿರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ.
ಕಟ್ಟಡದ ವಿವಿಧ ಶಾಖೆಗಗಳಿಗೆ ಬೆಂಕಿ ಆವರಿಸಿಕೊಂಡು ಹಲವಾರು ಲಾಕರ್‌ಗಳು, ಪೀಠೋಪಕರಣ, ಕಂಪ್ಯೂಟರ್‌ಗಳು ಸುಟ್ಟು ಕರಲಾಗಿವೆ. ಲಾಕರ್, ಕಂಪ್ಯೂಟರ್‌ಗಳಲ್ಲಿನ ಅಮೂಲ್ಯವಾಗಿರುವ ಡೇಟಾಗಳು, ಕಡತಗಳು ಸುಟ್ಟು ಹೋಗಿವೆ. ಸುದ್ದಿ ಅರಿಯುತ್ತಲೇ ಅಗ್ನಿ ಶಾಮಕ ದಳ ಸಿಬ್ಬಂದಿ ದೌಡಾಯಿಸಿ  ಸುಮಾರು ಹರಸಾಹಸ ಮಾಡಿ ಬೆಂಕಿ ನಂದಿಸಿದರು. ನಂದಿಸಿದ ನೀರಿನಲ್ಲಿ  ಕಡತಗಳು ತೇಲಾಡುತ್ತಿದ್ದವು.
ಜಿಲ್ಲಾಧಿಕಾರಿ ಯಶವಂತ ಗುರುಕರ್, ಜಿಪಂ ಸಿಇಒ ಡಾ.ಗಿರೀಶ್ ಬದೊಲೆ, ಡಿಸಿಪಿ ಶ್ರೀನಿವಾಸುಲು ಅಡ್ಡೂರು, ಇನ್‌ಸ್ಪೆಕ್ಟರ್ ಸಚಿನ್ ಚಲವಾದಿ ಸೇರಿದಂತೆ ಅನೇಕರು ಭೇಟಿ ನೀಡಿದರು. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.