ಜಿಲ್ಲೆ

ಕಲಬುರಗಿ ಜಯದೇವ ಸಂಸ್ಥೆ ಬಂದ್

ಕಲಬುರಗಿ: ಕರೊನಾ ಸೋಂಕಿತ ರೋಗಿ ಮಾಡಿದ ಯಡವಟ್ಟಿನಿಂದಾಗಿ ನಗರದ ಜಯದೇವ ಹೃದ್ರೋಗ ಸಂಸ್ಥೆ ಆಪತ್ತು ಎದುರಿಸುತ್ತಿದ್ದು, ಇದೀಗ ಬಂದ್ ಆಗಿದೆ. ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಐವರು ವೈದ್ಯರು ಸೇರಿ ಒಟ್ಟು 21 ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದೇ ಆಸ್ಪತ್ರೆ ಬಂದ್ಗೆ ಕಾರಣವಾಗಿದೆ.
ಓರ್ವ ವ್ಯಕ್ತಿ ಗಂಟಲ ದ್ರವ ಪರೀಕ್ಷೆಗೆ ಕೊಟ್ಟು ಎದೆ ನೋವು ಎಂದು ಚಿಕಿತ್ಸೆಗೆ ಬಂದಿದ್ದ. ತಾನು ಗಂಟಲ ಚಿಕಿತ್ಸೆಗೆ ದ್ರವ ಕೊಟ್ಟು ಬಂದಿದ್ದೇನೆ ಎಂಬ ಮಾಹಿತಿ ಮುಚ್ಚಿಟ್ಟಿದ್ದ. ಇದಾವುದನ್ನು ಅರಿಯದ ವೈದ್ಯರು ಮತ್ತು ಸಿಬ್ಬಂದಿ ಈತನಿಗೆ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಆ್ಯಂಜಿಯೋಗ್ರಾಂ ಚಿಕಿತ್ಸೆಗೆ ಗುರಿಪಡಿಸಿ ಶಸ್ತ್ರಚಿಕಿತ್ಸೆ ಮಾಡಿದಾಗ ಈತನಿಗೆ ಸೋಂಕು ದೃಢಪಟ್ಟಿದೆ.
ಇನ್ನೊಬ್ಬ ರೋಗಿಯ ಸ್ಥಿತಿಯೂ ಇದೇ ರೀತಿಯಾಗಿತ್ತೆನ್ನಲಾಗಿದೆ. ಇವರಿಬ್ಬರ ಸಂಪರ್ಕದಿಂದಾಗಿ ಐವರು ವೈದ್ಯರು ಮತ್ತು 16 ಸಿಬ್ಬಂದಿಗೆ ಸೋಂಕು ತಗುಲಿದೆ. ಹೀಗಾಗಿ ಜಯದೇವ ಹೃದ್ರೋಗ ಸಂಸ್ಥೆಯನ್ನು ಸೀಲ್ಡೌನ್ ಮಾಡಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಬಾಬುರಾವ್ ಹುಡಗೀಕರ್ ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸಿಬ್ಬಂದಿಯೂ ಸಹ ಈ ಇಬ್ಬರ ಸಂಪರ್ಕಕ್ಕೆ ಬಂದಿದ್ದರಿಂದ ಅವರ ಆರೋಗ್ಯ ಪರೀಕ್ಷಿಸಲಾಗುತ್ತಿದೆ. ವೈದ್ಯರು ಮತ್ತು ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದರಿಂದ ಇಲ್ಲಿಗೆ ಚಿಕಿತ್ಸೆಗೆ ಬರುತ್ತಿರುವ ಇತರೆ ರೋಗಿಗಳಿಗೂ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ.