ಕಲಬುರಗಿ: ಕರೊನಾದ ಅಬ್ಬರ ಮುಂದುವರಿದಿದ್ದು ನಗರದಲ್ಲಿ ಮತ್ತೊಂದು ಬಲಿಯಾಗಿದೆ. ಹೀಗಾಗಿ ಕರೊನಾ ಸಾವಿನ ಸಂಖ್ಯೆ ಜಿಲ್ಲೆಯಲ್ಲಿ ಎರಡಕ್ಕೇರಿದರೆ ರಾಜ್ಯದಲ್ಲಿ ಐದು ಆದಂತಾಗಿದೆ. ಮೃತ ವ್ಯಕ್ತಿ ಸೇರಿ ಬುಧವಾರ ಮತ್ತೆರಡು ಕರೊನಾ ಸೋಂಕಿತ ಅಧಿಕೃತ ಪ್ರಕರಣಗಳು ವರದಿಯಾಗಿದ್ದು, ಹೀಗಾಗಿ ಸೋಂಕಿತರ ಸಂಖ್ಯೆ ಒಂಭತ್ತಾಗಿದೆ.
65 ವರ್ಷದ ಹಣ್ಣು ಮಾರುವ ವ್ಯಾಪಾರಿಯೊಬ್ಬ ಕಳೆದ ರಾತ್ರಿ ಇಲ್ಲಿಯ ಇಎಸ್ಐ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಇವರಿಗೆ ಉಸಿರಾಟದ ತೊಂದರೆ ಮತ್ತು ಕರೊನಾ ಸೋಂಕು ಇತ್ತು ಎಂದು ಜಿಲ್ಲಾಧಿಕಾರಿ ಬಿ. ಶರತ್ ತಿಳಿಸಿದ್ದಾರೆ.
ಈತ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಎರಡು ದಿನ ಮೊದಲು ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿಯ ಸಂತ್ರಾಸವಾಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದ. ಆರೋಗ್ಯದ ಪರಿಸ್ಥಿತಿಯಲ್ಲಿ ಭಿನ್ನತೆ ಕಾಣದ್ದರಿಂದ ಸರ್ಕಾರಿ ಆಸ್ಪತ್ರೆಗೆ ಆತನನ್ನು ಸೇರಿಸಲಾಗಿತ್ತು. ಇಲ್ಲಿ ಆತನಿಗೆ ಕರೋನಾ ಸೋಂಕು ಇರುವುದು ಪತ್ತೆಯಾಯಿತು. ಈ ಸೋಂಕಿನಿಂದ ಹೊರಬರಲಾಗದೇ ಮಂಗಳವಾರ ರಾತ್ರಿ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ.
ಈ ಮಧ್ಯೆ 72 ವರ್ಷದ ಇನ್ನೊಬ್ಬ ಮಹಿಳೆಯನ್ನು ಇಲ್ಲಿಯ ಇಎಸ್ಐ ಆಸ್ಪತ್ರೆಯ ಐಸೋಲೇಟೆಡ್ ವಾರ್ಡ್ಗೆ ಸೇರಿಸಲಾಗಿದ್ದು, ಈಕೆಗೂ ಕರೋನಾ ಸೋಂಕು ಇರುವುದು ಖಚಿತವಾಗಿದೆ. ಈಗಾಗಲೇ ಈಕೆಯ ಮಗ ಇದೇ ರೋಗದಿಂದ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತ ವ್ಯಕ್ತಿ ಚಿಕಿತ್ಸೆ ಪಡೆದುಕೊಂಡಿದ್ದ ಖಾಸಗಿ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಯವರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಮೃತನಿಗೆ ಚಿಕಿತ್ಸೆ ನೀಡಿದ ವೈದ್ಯ ಮತ್ತು ಸಿಬ್ಬಂದಿಯನ್ನು ಸಹ ಪ್ರತ್ಯೇಕವಾಗಿ ಹೋಂ ಕ್ವಾರಂಟೈನ್ಲ್ಲಿರಿಸಿದ್ದಾರೆ. ಸಾವನ್ನಪ್ಪಿದ ವ್ಯಕ್ತಿ ಇದ್ದ ಪ್ರದೇಶವನ್ನು ಕಂಟೋನ್ಮೆಂಟ್ ಪ್ರದೇಶ ಎಂದು ಘೋಷಿಸಿ ಅಲ್ಲಿ ಎಲ್ಲ ಮುಂಜಾಗ್ರತಾ ಕ್ರಮ ಮತ್ತು ಬಂದೋಬಸ್ತ್ ಮಾಡಲಾಗಿದೆ.
ಮೃತ ವ್ಯಕ್ತಿಯಿಂದ ಯಾರು ಯಾರು ಹಣ್ಣು ಖರೀದಿಸಿದ್ದಾರೆ ಎನ್ನುವುದು ಪತ್ತೆಯಾಗುವುದೇ ಕಷ್ಟದ ಸಂಗತಿಯಾಗಿದ್ದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ. ಈತನಿಂದ ಹಣ್ಣು ಖರೀದಿಸಿದವರೂ ಆತಂಕಕ್ಕೊಳಗಾಗಿದ್ದಾರೆ. ಮೃತನ ಒಟ್ಟಾರೆ ಟ್ರಾವೆಲ್ ಹಿಸ್ಟರಿ
ಗೊತ್ತಾಗಬೇಕಾಗಿದೆ.
ಕರೊನಾ ದೇಶಕ್ಕೆ ಕಾಲಿಡುತ್ತಲೇ ಮೊದಲ ಬಲಿಯಾಗಿದ್ದೂ ಕಲಬುರಗಿಯಲ್ಲಿಯೇ. ನಗರದ ಸಿದ್ದಿಕಿ(76) ಸೌದಿಯಿಂದ ಕಲಬುರಗಿಗೆ ಆಗಮಿಸಿದ್ದರು. ಮಾಚರ್್ 10ರಂದು ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದರು. ಸಿದ್ದಿಕಿ ಪುತ್ರಿಗೂ ಸೋಂಕು ತಗಲಿತ್ತಾದರೂ ಅವರು ಗುಣಮುಖರಾಗಿದ್ದಾರೆ. ಈ ಘಟನೆ ಜರುಗಿದ ತಿಂಗಳಲ್ಲಿ ಮತ್ತೊಂದು ಸಾವು ಸಂಭವಿಸಿರುವುದು ಜಿಲ್ಲಾಡಳಿತದ ತಲೆನೋವು ಹೆಚ್ಚಿಸಿದೆ.
ಮಂಗಳವಾರವಷ್ಟೇ ಎರಡು ಪ್ರಕರಣಗಳು ದೃಢೀಕರಣಗೊಂಡಿದ್ದವು. ಇಂದು ಮತ್ತೇ ಎರಡು ಪ್ರಕರಣಗಳು ದೃಢವಾಗಿರುವುದು ಜಿಲ್ಲೆಯ ಜನತೆಯ ನಿದ್ದೆಗೆಡುವಂತೆ ಮಾಡಿದೆ. ಜಿಲ್ಲೆಯಲ್ಲಿ ಈವರೆಗೆ 201 ಶಂಕಿತರ ರಕ್ತ, ಗಂಟಲು ದ್ರವ ಟೆಸ್ಟ್ಗೆ ಕಳುಹಿಸಲಾಗಿತ್ತು. ಇವರಲ್ಲಿ ಒಂಬತ್ತನ್ನು ಹೊರತುಪಡಿಸಿದರೆ 176 ಜನರ ರಿಪೋಟರ್್ ನೆಗೆಟಿವ್ ಬಂದಿದೆ.
ತಾಂತ್ರಿಕ ಕಾರಣಗಳಿಂದ ಇಬ್ಬರ ಲ್ಯಾಬ್ ಟೆಸ್ಟ್ ಇನ್ನೂ ಆಗಿಲ್ಲ. 14 ಜನರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ಒಟ್ಟು ಇರುವ ನಾಲ್ಕು ಕಂಟೋನ್ಮೆಂಟ್ ಝೋನ್ಗಳಲ್ಲಿ 14112 ಮನೆಗಳ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್.ಬಿ ತಿಳಿಸಿದ್ದಾರೆ.
ಪ್ರೈಮರಿ ಕಾಂಟ್ಯಾಕ್ಟ್ಸ್ 162, ಸೆಕೆಂಡರಿ ಕಾಂಟ್ಯಾಕ್ಟ್ಸ್ 730, ವಿದೇಶದಿಂದ ಬಂದವರು 487 ಜನರನ್ನು ಗುರುತಿಸಲಾಗಿದೆ. ಹೋಂ ಕ್ವಾರಂಟೈನ್ನಲ್ಲಿ 375 ಜನರನ್ನು ಇರಿಸಲಾಗಿದೆ. ಈವರೆಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿದ್ದ 916 ಜನರನ್ನು ಮುಕ್ತಗೊಳಿಸಿ ಮುಂದಿನ ದಿನಗಳಲ್ಲಿ ಏನಾದರೂ ತಮಗೆ ಲಕ್ಷಣಗಳು ಗೋಚರಿಸಿದರೆ ಸ್ವಯಂ ಪ್ರೇರಣೆಯಿಂದ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. 24 ಜನರನ್ನು ಇಎಸ್ಐಸಿ ಐಸೋಲೇಟೆಡ್ ವಾಡರ್್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.