ಜಿಲ್ಲೆ

ಕಲಘಟಗಿ ಬಸ್ ಡಿಪೋ ಉದ್ಘಾಟನೆಗೆ ಗ್ರಹಣ

ವಿರೇಶ ಹಾರೊಗೇರಿ ಕಲಘಟಗಿ

ಪಟ್ಟಣದ ದೇವಿಕೊಪ್ಪ ಮಾರ್ಗದಲ್ಲಿ ನಿರ್ವಣಗೊಂಡಿರುವ ಕಲಘಟಗಿ ಬಸ್ ಘಟಕ ಉದ್ಘಾಟನೆಗೆ ಗ್ರಹಣ ಹಿಡಿದಿದೆ. ಇದರಿಂದ ತಾಲೂಕಿನ ಜನ ತೊಂದರೆ ಅನುಭವಿಸುವಂತಾಗಿದೆ.

ಕಲಘಟಗಿ ಹಾಗೂ ಸುತ್ತಮುತ್ತಲಿನ ಜನರ ಅನುಕೂಲಕ್ಕಾಗಿ ಕಲಘಟಗಿ ಬಸ್ ಡಿಪೋವನ್ನು 2017ರಲ್ಲಿ 5.18 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಗಿದೆ. ಆದರೆ, ಲೋಕಾರ್ಪಣೆಗೊಳ್ಳುವುದು ಯಾವಾಗ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

ತಾಲೂಕಿನ ಗ್ರಾಮೀಣ ಪ್ರದೇಶಗಳಿಂದ ದಿನಂಪ್ರತಿ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಕಲಘಟಗಿ ಮಾರ್ಗವಾಗಿ ಧಾರವಾಡ, ಹುಬ್ಬಳ್ಳಿಗೆ ತೆರಳುತ್ತಾರೆ. ಆದರೆ, ಬಸ್​ಗಳು ಹಳಿಯಾಳ, ದಾಂಡೇಲಿ, ಹುಬ್ಬಳ್ಳಿ, ಧಾರವಾಡ ಡಿಪೋಗಳಿಂದ ತಡವಾಗಿ ಬರುವುದರಿಂದ ಸಮಯಕ್ಕೆ ಸರಿಯಾಗಿ ಶಾಲೆ-ಕಾಲೇಜ್​ಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಕಲಘಟಗಿ ಬಸ್ ಡಿಪೋ ಉದ್ಘಾಟನೆಯಾದರೆ ಸಮಸ್ಯೆ ಬಗೆಹರಿಯಲಿದೆ ಎಂಬುದು ಸಾರ್ವಜನಿಕರು, ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.

ಎರಡು ವರ್ಷಗಳ ಹಿಂದೆ ಮಾಜಿ ಸಚಿವ ಸಂತೋಷ ಲಾಡ್ ಅವರು ಡಿಪೋ ಕಾಮಗಾರಿಗೆ ಚಾಲನೆ ನೀಡಿದ್ದರು. 2 ವರ್ಷ ಗತಿಸಿದರೂ ಉದ್ಘಾಟನೆಗೆ ಗ್ರಹಣ ಹಿಡಿದಂತಾಗಿದೆ. ಈಗಿನ ಬಿಜೆಪಿ ಆಡಳಿತದಲ್ಲಾದರೂ ಉದ್ಘಾಟನೆಯಾಗಲಿ ಎಂಬುದು ನಾಗರಿಕರ ಆಶಯವಾಗಿದೆ.

2 ವರ್ಷಗಳಿಂದ ಧಾರವಾಡಕ್ಕೆ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿದ್ದೇನೆ. ಸಮಯಕ್ಕೆ ಸರಿಯಾಗಿ ಬಸ್ ಬರುವುದಿಲ್ಲ. ಸಾರಿಗೆ ನಿಯಂತ್ರಣಾಧಿಕಾರಿಗಳನ್ನು ವಿಚಾರಿಸಿದಾಗಲೊಮ್ಮೆ ದಾಂಡೇಲಿ, ಹಳಿಯಾಳ ಡಿಪೋಗಳ ಬಸ್​ಗಳು ಇನ್ನೂ ಬಂದಿಲ್ಲ. ಬರಬಹುದು ಎಂದು ದಿನಂಪ್ರತಿ ಅದನ್ನೇ ಹೇಳುತ್ತಿದ್ದಾರೆ. ಆದಷ್ಟು ಬೇಗ ಕಲಘಟಗಿ ಬಸ್ ಡಿಪೋ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ, ಜನರಿಗೆ ಅನುಕೂಲ ಕಲ್ಪಿಸಲಿ. | ಸಂತೋಷ ಕುಂಬಾರ ವಿದ್ಯಾರ್ಥಿ
ನಾವು ಧಾರವಾಡಕ್ಕೆ ಕೂಲಿ ಕೆಲಸಕ್ಕಾಗಿ ದಿನಂಪ್ರತಿ ತೆರಳುತ್ತೇವೆ. ಅದಕ್ಕಾಗಿ ತಿಂಗಳ ಪಾಸ್ ತೆಗೆಸಿದ್ದೇವೆ. ಬಸ್ ಸಮಯಕ್ಕೆ ಸರಿಯಾಗಿ ಬಾರದಿದ್ದಾಗ ಹೆಚ್ಚು ಹಣ ಕೊಟ್ಟು ಟೆಂಪೋ, ಕ್ರೂಸರ್​ಗಳಿಗೆ ನೀಡಿ ತೆರಳಬೇಕಾಗಿದೆ. ಹೀಗಾದರೆ ನಮ್ಮ ದುಡಿಮೆಯನ್ನು ಬರೀ ವಾಹನ ಖರ್ಚಿಗೆ ನೀಡುವಂತಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಕಲಘಟಗಿ ಬಸ್ ಡಿಪೋವನ್ನು ಕೂಡಲೆ ಉದ್ಘಾಟಿಸಿ ಕೂಲಿ ಕಾರ್ವಿುಕರ ನೆಮ್ಮದಿ ಕಾಪಾಡಬೇಕು. | ನೀಲಪ್ಪ ತಳವಾರ ಬಮ್ಮಿಗಟ್ಟಿ ನಿವಾಸಿ
ಕಾಮಗಾರಿ ಇನ್ನು ಅಲ್ಪ ಸ್ವಲ್ಪ ಉಳಿದಿದೆ. ಅದನ್ನು ಪೂರ್ಣ ಮಾಡಿ ನಮಗೆ ಹಸ್ತಾಂತರಿಸಬೇಕು. ಡೀಸೆಲ್ ಬಂಕ್ ನಿರ್ವಣಕ್ಕೆ ಅನುಮತಿ ಕೊಟ್ಟ ಮೇಲೆ ಕಲಘಟಗಿ ಡಿಪೋ ಉದ್ಘಾಟನೆ ನೆರವೇರುವುದು. | ಎಚ್. ರಾಮನಗೌಡ್ರ, ಹುಬ್ಬಳ್ಳಿ ವಿಭಾಗದ ನಿಯಂತ್ರಣಾಧಿಕಾರಿ