ಬಸವಕಲ್ಯಾಣ: ಕಲಖೋರಾ ತಾಂಡಾದಲ್ಲಿಯ ಶ್ರೀ ಮರಿಯಮ್ಮ ದೇವಸ್ಥಾನದ ಸುತ್ತ ಮುಂಜಾಗೃತಾ ಕ್ರಮವಾಗಿ ಕಲಂ ೧೪೪ರ ಅಡಿ ಒಂದು ವಾರ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸೆ.೯ರಿಂದ ೧೭ರವರೆಗೆ ಬೆಳಗ್ಗೆ ೬ರಿಂದ ಸಂಜೆ ೬ರವರೆಗೆ ನಿಷೇಧಾಜ್ಞೆ ಜಾರಿ ಮಾಡಿ, ತಹಸೀಲ್ದಾರ್, ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಶಾಂತಗೌಡ ಬಿರಾದಾರ ಆದೇಶಿಸಿದ್ದಾರೆ.
ಶ್ರೀ ಮರಿಯಮ್ಮ (ಪಾಂಚಲಗಿ)ದೇವಸ್ಥಾನ ಪಂಚ ಕಮಿಟಿ ತಕರಾರು ಕುರಿತು ೨೦೨೦ ಜನೆವರಿ ೭ರಿಂದ ಸಿಆರ್‌ಪಿಸಿ ಕಲಂ ೧೪೫ರ ಸರ್ಕಾರದ ಕಬ್ಜೆಯಲ್ಲಿ ಪಡೆಯಲಾಗಿದೆ. ಶ್ರಾವಣ ಮುಕ್ತಾಯದಲ್ಲಿ ಸಪ್ತಾಹ ಆಚರಿಸುವಂತೆ ತಾಂಡಾದ ಕೆಲವರಿಂದ ಕೋರಲಾಗಿತ್ತು. ಪಂಚ ಕಮಿಟಿ ಬಗ್ಗೆ ತಕರಾರಿನ ಹಿನ್ನೆಲೆಯಲ್ಲ್ಲಿ ಮುಂಜಾಗೃತಾ ಕ್ರಮವಾಗಿ ಕಲಂ ೧೪೪ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ದೇವಸ್ಥಾನ ಪಂಚ ಕಮಿಟಿ ಬಗ್ಗೆ ತಕರಾರು ಇದ್ದು, ಶ್ರಾವಣ ಮಾಸದ ಮುಕ್ತಾಯ ಸಮಾರಂಭದಲ್ಲಿ ಸಪ್ತಾಹ ನಡೆದರೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವ ಸಾಧ್ಯತೆ ಇರುವುದರಿಂದ ನಿಷೇಧಾಜ್ಞೆ ಜಾರಿಗೊಳಿಸಬೇಕು ಎನ್ನುವ ಕುರಿತು ಪೊಲೀಸ್ ಉಪ ನಿರೀಕ್ಷಕರು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮದುವೆ ಧಾರ್ಮಿಕ ಕಾರ್ಯಕ್ರಮ ಮತ್ತು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದ ಸಮಾರಂಭಗಳಿಗೆ ಆದೇಶ ಅನ್ವಯಿಸುವುದಿಲ್ಲ. ಸಾರ್ವಜನಿಕ ಪ್ರತಿಭಟನೆ ನಿಷೇಧ ಸೇರಿ ಕೆಲ ಷರತ್ತಿನೊಂದಿಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.