ಮೈಸೂರು: ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಏಕೀಕರಣ ಚಳವಳಿಯ ಮೂಲಕ ಒಗ್ಗೂಡಿಸಿದ ಪ್ರಮುಖರಲ್ಲಿ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು ಮೊದಲಿಗರಾಗಿದ್ದಾರೆ. ಹೀಗಾಗಿ ಇಂದಿಗೂ ಅವರು ಕನ್ನಡದ ಅಸ್ಮಿತೆ, ಕರ್ನಾಟಕದ ಸಾಕ್ಷಿಪ್ರಜ್ಞೆಯಾಗಿದ್ದಾರೆ ಎಂದು ಲೇಖಕ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ಹಿರಣ್ಮಯಿ ಪ್ರತಿಷ್ಠಾನ, ಕಾವೇರಿ ಬಳಗದಿಂದ ನಗರದ ಡಿ.ಬನುಮಯ್ಯ ಬಾಲಕಿಯರ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಆಲೂರು ವೆಂಕಟರಾಯರ ಜನ್ಮದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಾಲಕರಾಗಿದ್ದಾಗಲೇ ಕನ್ನಡ ನಾಡು, ನುಡಿಯ ಬಗ್ಗೆ ಅಪಾರ ಪ್ರೇಮ ಹೊಂದಿದ್ದ ಆಲೂರು ವೆಂಕಟರಾಯರು, ಅಚ್ಚ ಕನ್ನಡ ನೆಲವಾದ ಉತ್ತರ ಕರ್ನಾಟಕದ ಭಾಗವನ್ನು ದಕ್ಷಿಣ ಮರಾಠ ದೇಶ ಎಂದು ಮರಾಠಿಗರು ಕರೆಯುತ್ತಿದ್ದ ಕಾಲಘಟ್ಟದಲ್ಲಿ ಧಾರವಾಡದಲ್ಲಿ ಮರಾಠಿ ಬಾಹುಳ್ಯದ ನಡುವೆಯೇ ಕನ್ನಡದ ಕಿಚ್ಚು ಹೊತ್ತಿಸಿ ಕನ್ನಡ ನಾಡು, ನುಡಿಯ ಬಗೆಗೆ ಕೆಚ್ಚಿನಿಂದ ಹೋರಾಟ ಆರಂಭಿಸಿದರು ಎಂದರು.
ಇಂತಹ ಅಪ್ರತಿಮ ಕನ್ನಡ ಚೇತನದ ಆತ್ಮಕ್ಕೆ ಶಾಂತಿ ದೊರೆಯಬೇಕೆಂದರೆ ಅವರು ಪರಿಶ್ರಮದ ಹೋರಾಟದಿಂದ ಒಂದುಗೂಡಿಸಿ ನಿರ್ಮಿಸಿರುವ ಕರ್ನಾಟಕದ ಪುರೋಭಿವೃದ್ಧಿ ಹಾಗೂ ಕನ್ನಡ ಭಾಷೆಯ ಉಳಿವಿಗೆ ಪ್ರತಿಯೊಬ್ಬ ಕನ್ನಡಿಗರೂ ಕಂಕಣ ಬದ್ಧರಾಗಬೇಕು. ಎಲ್ಲರಲ್ಲೂ ಕನ್ನಡ ಪ್ರಜ್ಞೆ ಮೂಡಿಸಿ ಅಭಿಮಾನದ ಬೀಜ ಬಿತ್ತಿ ಬೆಳೆಸಬೇಕು ಎಂದು ಹೇಳಿದರು.
ನಾಡಿನ ಉದ್ದಗಲಕ್ಕೂ ಸುತ್ತಿ ಆಲೂರರು ‘ಕರ್ನಾಟಕ ಗತವೈಭವ’ ಎಂಬ ಮಹತ್ವದ ಕೃತಿ ಬರೆದಿದ್ದು, ನಾಡಿನ ಚಿರ ದಿಕ್ಸೂಚಿಯಂತಿರುವ ಆ ಕೃತಿಯನ್ನು ಪ್ರತಿಯೊಬ್ಬರೂ ಓದಬೇಕು. ಅಷ್ಟೇ ಅಲ್ಲದೆ, ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಇದು ಪಠ್ಯವಾಗಬೇಕು. ಈ ದಿಸೆಯಲ್ಲಿ ಸರ್ಕಾರ ಕನ್ನಡದ ಕಾಳಜಿಯಿಂದ ಕಾರ್ಯೋನ್ಮುಖವಾಗಬೇಕು. ಕೃತಿಯನ್ನು ಮರು ಮುದ್ರಣಗೊಳಿಸಿ ಪ್ರತಿಯೊಬ್ಬ ಕನ್ನಡಿಗನ ಕೈಗೆಟುಕುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಮುಖ್ಯ ಶಿಕ್ಷಕ ಎಚ್. ಎಸ್.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಪುರದ ಹಿತ ಬಯಸುವವರು ಪುರೋಹಿತರಾದರೆ, ಇಡೀ ನಾಡಿನ ಸಂರಕ್ಷಣೆ, ಹಿತ ಬಯಸಿದ ಆಲೂರರು ಕುಲಪುರೋಹಿತ, ಕುಲೋದ್ಧಾರರಾಗಿದ್ದಾರೆ. ಹಾಗಾಗಿ ಮಾತೃಭಾಷಾಭಿಮಾನ ವಿಷಯದಲ್ಲಿ ಪ್ರತಿಯೊಬ್ಬರೂ ಆಲೂರರನ್ನು ಮಾದರಿಯನ್ನಾಗಿಸಿಕೊಳ್ಳಬೇಕು ಎಂದರು.
ಆಲೂರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಮಾರಂಭವನ್ನು ಪತ್ರಕರ್ತ ದೊಡ್ಡನಹುಂಡಿ ರಾಜಣ್ಣ ಉದ್ಘಾಟಿಸಿ ಮಾತನಾಡಿದರು. ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಹಾಗೂ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ಎಸ್.ಲಕ್ಷ್ಮೀ, ಸಿಂಧುಮೇನ ಅವರನ್ನು ಪುರಸ್ಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿನಿಯರಾದ ಜಯಲಕ್ಷ್ಮೀ, ಆರ್.ಪ್ರೀತಿ, ಸ್ಫೂರ್ತಿ ಅವರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ಎಚ್.ಪಿ.ಹರೀಶ್, ಮಂಗಳಗೌರಮ್ಮ, ಶ್ರೀನಿವಾಸಮೂರ್ತಿ, ಎಂ.ಎಸ್.ಸತೀಶ್, ಚೇತನ್, ಶಿವು ಇತರರು ಇದ್ದರು.