ಜಿಲ್ಲೆ

ಕರ್ನಾಟಕ ಹೈಸ್ಕೂಲ್‌ಗೆ ಪ್ರಶಸ್ತಿ

ಧಾರವಾಡ: ಹೊಸಪೇಟೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 16 ವರ್ಷಕ್ಕಿಂತ ಕಿರಿಯ ಬಾಲಕರ ಆಹ್ವಾನ ಅಂತರ ಶಾಲಾ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ನಗರದ ಕರ್ನಾಟಕ ಎಜ್ಯುಕೇಶನ್ ಬೋರ್ಡಿನ ಕರ್ನಾಟಕ ಹೈಸ್ಕೂಲ್ ತಂಡ ಚಾಂಪಿಯನ್ ಆಗಿದೆ.
ವಿಜಯನಗರ ಯುಥ್ಸ್ ಹಾಗೂ ಹೊಸಪೇಟೆ ಬಾಲರ್ಸ್‌ ಆಶ್ರಯದಲ್ಲಿ ಏರ್ಪಡಿಸಿದ್ದ ಟೂರ್ನಿಯ ಫೈನಲ್‌ನಲ್ಲಿ ಕರ್ನಾಟಕ ಹೈಸ್ಕೂಲ್ ತಂಡವು ಹೊಸಪೇಟೆಯ ವಿಜಯನಗರ ಹೈಸ್ಕೂಲ್ ತಂಡವನ್ನು 28-8 ಪಾಯಿಂಟ್‌ಗಳಿಂದ ಪರಾಭವಗೊಳಿಸಿತು. ಉತ್ತಮ ಆಟ ಪ್ರದರ್ಶಿಸಿದ ರಮೇಶ ಬೆಕ್ಕೇರಿ 9 ಪಾಯಿಂಟ್ ಗಳಿಸಿ ತಂಡದ ಗೆಲುವಿನ ರೂವಾರಿ ಎನಿಸಿದರು.
ಇದಕ್ಕೂ ಮೊದಲು ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಹೈಸ್ಕೂಲ್ 34-33 ಅಂಕಗಳಿಂದ ದಾವಣಗೆರೆಯ ಲೂರ್ಧ ಶಾಲೆಯಲ್ಲಿ ಸೋಲಿಸಿದರೆ, ವಿಜಯನಗರ ಹೈಸ್ಕೂಲ್ ತಂಡವು ಧಾರವಾಡ ಕೆಲಗೇರಿ ಜೆಎಸ್‌ಎಸ್ ಶಾಲೆಯನ್ನು ಸೋಲಿಸಿತ್ತು.
ಕರ್ನಾಟಕ ಶಾಲೆ ತಂಡ ಹಾಗೂ ತರಬೇತುದಾರ ರಾಜಾರಾಮ ಮೊಕಾಶಿ ಅವರಿಗೆ ಕೆ.ಇ. ಬೋರ್ಡಿನ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ, ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ, ಶ್ರಿನಿವಾಸ ಪರಾಂಡೆ, ವಸಂತ ಮುರ್ಡೇಶ್ವರ, ಆಡಳಿತಾಧಿಕಾರಿ ಜಿ.ಆರ್. ಭಟ್ ಹಾಗೂ ಪ್ರಾಂಶುಪಾಲ ಎನ್.ಎನ್. ಸವಣೂರ ಅಭಿನಂದಿಸಿದ್ದಾರೆ.