ಕಲಬುರಗಿ: ಕರ್ನಾಟಕವು ಹಿಂದುಸ್ತಾನಿ ಗಾಯನ ಮತ್ತು ಕರ್ನಾಟಕ ಸಂಗೀತದ ತೊಟ್ಟಿಲಾಗಿದೆ. ಸಂಗೀತ ಪ್ರಪಂಚಕ್ಕೆ ಅತ್ಯುತ್ತಮ ಸಾಂಪ್ರದಾಯಿಕ ಸಂಗೀತಗಾರರನ್ನು ನೀಡಿದೆ ಎಂದು ಖ್ಯಾತ ಹಿಂದೂಸ್ತಾನಿ ಗಾಯಕ ಹಾಗೂ ಕರ್ನಾಟಕ ಕೇಂದ್ರೀಯ ವಿವಿ ಸಂಗೀತ ವಿಭಾಗದ ಬೋಧಕ ಡಾ.ಸ್ವಪ್ನಿಲ್ ಚಾಪೇಕರ್ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ, ಸಂಗೀತ ವಿಭಾಗದಿಂದ ಭಾನುವಾರ ಆಯೋಜಿಸಿದ್ದ ವಿಶ್ವ ಸಂಗೀತ ದಿನಾಚರಣೆಯಲ್ಲಿ ಮಾತನಾಡಿ, ಭಾರತ ರತ್ನ ಪಂಡಿತ್ ಭೀಮಸೇನ್ ಜೋಶಿ, ಪಂಡಿತ್ ಗಂಗೂಬಾಯಿ ಹಾನಗಲ್, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸೇರಿ ಕರ್ನಾಟಕದ ಹಲವು ಸಂಗೀತಗಾರರನ್ನು ಹೆಸರಿಸಬಹುದು ಎಂದು ಹೇಳಿದರು.
ಅನಾದಿ ಕಾಲದಿಂದಲೂ ಸಂಗೀತ ಪ್ರಮುಖ ಸ್ಥಾನ ಪಡೆದಿದೆ. ದೇಶ ಆಳಿದ ರಾಜರು ಮತ್ತು ಚಕ್ರವರ್ತಿಗಳ ಆಸ್ಥಾನಗಳಲ್ಲಿ ಸಂಗೀತಗಾರರು ಪ್ರಧಾನ ಸ್ಥಾನ ಪಡೆದಿದ್ದರು. ಅಕ್ಬರ್ ಚಕ್ರವರ್ತಿ ಪಂಡಿತ್ ತಾನಸೇನ್‌ರನ್ನು ವಿಶ್ವದ ಅತ್ಯುತ್ತಮ ಸಂಗೀತಗಾರ ಎಂದು ಘೋಷಿಸಿದಾಗ, ಅದನ್ನು ತಿರಸ್ಕರಿಸಿ, ನನ್ನ ಗುರು ಸಂತ ಹರಿದಾಸರು ಎಂದಿದ್ದರು. ಹರಿದಾಸರ ಸಂಗೀತ ಕೇಳಿದ ಅಕ್ಬರ್ ಸಂಗೀತ ರಹಸ್ಯವೇನು ಎಂದು ಪ್ರಶ್ನಿಸಿದ್ದ. ಆಗ ಹರಿದಾಸರು ನನ್ನ ಹಾಡು ದೇವರಿಗೆ ಅರ್ಪಿಸುತ್ತೇನೆ, ಇತರರಿಗೆ ಹಾಡುವುದಿಲ್ಲ ಎಂದಿದ್ದರು. ಸಂಗೀತಗಾರನ ಶಕ್ತಿ ಇಂತಹ ಭಾವದಲ್ಲಿ ಅಡಗಿದೆ ಎಂದರು.
ಪತ್ರಿಕೋದ್ಯಮ ವಿಭಾಗದ ಡೀನ್ ಟಿ.ವಿ.ಶಿವಾನಂದನ್ ಮಾತನಾಡಿ, ಸಂಗೀತಕ್ಕೆ ಅಡೆತಡೆಗಳಿಲ್ಲ, ಗಡಿಗಳಿಲ್ಲ ಮತ್ತು ಸಂಗೀತ ಆನಂದಿಸಲು ಯಾವುದೇ ಭಾಷೆಗಳು ತಿಳಿದಿರಬೇಕಿಲ್ಲ. ಭಾಷೆ, ಧರ್ಮ ಮತ್ತು ಬಣ್ಣದ ಅಡೆತಡೆಗಳನ್ನು ಮೀರಿ ಪ್ರಪಂಚದಾದ್ಯAತ ಜನರನ್ನು ಒಂದುಗೂಡಿಸುವ ಮಾಧ್ಯಮ ಸಂಗೀತ ಎಂದು ಹೇಳಿದರು.
ಡಾ.ಚಾಪೇಕರ್ ಸಂಗೀತ ವಿಭಾಗದ ವಿದ್ಯಾರ್ಥಿಗಳಿಗೆ ಹಿಂದುಸ್ತಾನಿ ಸಂಗೀತದ ಕಚೇರಿ ಪ್ರಸ್ತುತಪಡಿಸಿದರು. ಸಂಗೀತ ವಿಭಾಗದ ಡೀನ್ ಪ್ರೊ.ರೇವಯ್ಯ ವಸ್ತö್ರದಮಠ ಅಧ್ಯಕ್ಷತೆ ವಹಿಸಿದ್ದರು.