ಎಸ್‌ಆರ್‌ಎಸ್ ಪ್ರಜ್ಞಾ ವಿದ್ಯಾಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ವಿದ್ಯಾರ್ಥಿಗಳು. 
ಜಿಲ್ಲೆ

ಕರ್ನಾಟಕ ರಾಜ್ಯವಾಗಿ 50 ವರ್ಷ: ಎಸ್‌ಆರ್‌ಎಸ್ ಪ್ರಜ್ಞಾ ವಿದ್ಯಾಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಹಾಸನ: ಭಾಷಾವಾರು ಪ್ರಾಂತ್ಯವನ್ನು ರಚಿಸಿ 1956 ನವೆಂಬರ್ 1 ರಂದು ಮೈಸೂರು ರಾಜ್ಯ ಉದಯವಾಯಿತು. ಹೊಸದಾಗಿ ಏಕೀಕೃತಗೊಂಡ ಮೈಸೂರು ರಾಜ್ಯಕ್ಕೆ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ್ ಅರಸು ಅವರ ನೇತೃತ್ವದಲ್ಲಿ 1973ರ ನವೆಂಬರ್ 01 ರಂದು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು ಎಂದು ಎಸ್‌ಆರ್‌ಎಸ್ ಪ್ರಜ್ಞಾ ವಿದ್ಯಾಶಾಲೆ ಅಧ್ಯಕ್ಷ ಆರ್ ರಾಜಗೋಪಾಲ ಶೆಟ್ಟಿ ತಿಳಿಸಿದರು.

ಎಸ್‌ಆರ್‌ಎಸ್ ಪ್ರಜ್ಞಾ ವಿದ್ಯಾಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜಗಳನ್ನು ಆರೋಹಣ ಮಾಡಿ, ಕನ್ನಡಾಂಬೆಗೆ ದೀಪ ಬೆಳಗಿಸಿ ಪುಷ್ಪ ನಮನ ಅರ್ಪಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷ ನವೆಂಬರ್ 01 ರಂದು ಕನ್ನಡ ರಾಜ್ಯೋತ್ಸವವನ್ನು ನಾಡಿನೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಕುವೆಂಪು ಅವರ ಮಾತಿನಂತೆ ಕನ್ನಡ ಭಾಷೆಯನ್ನು ನಾವೆಲ್ಲರು ಉಳಿಸಿ ಬೆಳೆಸಬೇಕು. ಮಕ್ಕಳಾದ ನೀವು ಕನ್ನಡ ಭಾಷೆಯ ಮಹತ್ವವನ್ನು ಅರಿತು ಅದನ್ನು ತನು ಮನಗಳಲ್ಲಿ ತುಂಬಿಕೊಂಡು ಕನ್ನಡ ನಾಡನ್ನು, ಕನ್ನಡ ಭಾಷೆಯನ್ನು ಸಮೃದ್ಧಗೊಳಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಕನ್ನಡ ಭಾಷೆಗೆ ಸಂಬಂಧಿಸಿದ ಭಾಷಣ, ವೇಷಭೂಷಣ, ವೃಂದ ಗೀತೆ, ರೂಪಕಗಳು, ಕನ್ನಡ ನುಡಿಮುತ್ತುಗಳು, ಕನ್ನಡದ ವಿಶೇಷತೆಗಳು, ಕನ್ನಡದ ಕವಿತ್ರಯರುಗಳ ಪರಿಚಯ, ಕನ್ನಡದ ಕವಿಗಳ ಬಿರುದುಗಳು, ಕನ್ನಡ ರಸಪ್ರಶ್ನೆಗಳು, ಕರ್ನಾಟಕದ ಐತಿಹಾಸಿಕ ಸ್ಥಳಗಳು ಹಾಗೂ ಅವುಗಳ ವಿಶೇಷಗಳು ಮುಂತಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನದ ಮೂಲಕ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯ ಮೆರಗು ಹೆಚ್ಚಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಂ. ನಟರಾಜ್, ಆಶಾ ನಟರಾಜ್, ಶಿಕ್ಷಕ ವೃಂದದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.