ಜಿಲ್ಲೆ

ಕರ್ನಾಟಕ ರಾಜ್ಯ ರೈತ ಸಂಘದಿಂದ ಪೊರಕೆ ಚಳುವಳಿ

Chamarajanagar

ಚಾಮರಾಜನಗರ : ಕೊಳ್ಳೇಗಾಲದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಶನಿವಾರ ಅಬಕಾರಿ ಕಚೇರಿ ಮುಂದೆ ಪೊರಕೆ ಚಳವಳಿ ನಡೆಯಿತು.


ಮದ್ಯ ಸೇವನೆಯಿಂದ ಮನೆಯಲ್ಲಿ ಅಶಾಂತಿ ಉಂಟಾಗಿ, ಕುಟುಂಬಗಳಲ್ಲಿ ಗಲಾಟೆಗಳು ಸಂಭವಿಸುತ್ತಿವೆ. ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯುವಕರು ಸಣ್ಣ ವಯಸ್ಸಿಗೆ ಕುಡಿತದ ಚಟಕ್ಕೆ ಒಳಗಾಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬಡ ಕುಟುಂಬಗಳು ಬೀದಿಗೆ ಬೀಳುತ್ತಿವೆ ಎಂದು ರೈತರು ಅಸಮಧಾನ ಹೊರಹಾಕಿದರು.


ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಕಂಠಸ್ವಾಮಿ ಮಾತನಾಡಿ, ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದು ಕಾನೂನು ಬಾಹಿರ ಚಟುವಟಿಕೆ. ಅಬಕಾರಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.


ಇಲಾಖೆಯ ಕೆಲವು ಸಿಬ್ಬಂದಿ ಕುಮ್ಮಕ್ಕಿನಿಂದಲೆ ಚಿಲ್ಲರೆ ಅಂಗಡಿ, ಮಾಂಸ ಮಾರಾಟ ಮಾಡುವ ಅಂಗಡಿ ಹಾಗೂ ಕೆಲವು ಮನೆಗಳಲ್ಲಿ ನಿರಂತರವಾಗಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ನಡೆಸುವ ಜನ ಸಂಪರ್ಕ ಸಭೆಗಳಲ್ಲಿ ಈ ಬಗ್ಗೆ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು. ಮುಖಂಡರಾದ ಬಸವರಾಜು, ಸಿ.ಚಂದ್ರಶೇಖರ್, ರಾಜಶೇಕರ್ ಮೂರ್ತಿ ಇತರರು ಇದ್ದರು.