ಅರಕಲಗೂಡು: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಶನಿವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಅಂಬೇಡ್ಕರ್ ಪ್ರತಿಮೆ ಬಳಿ ಮೌನ ಮೆರವಣಿಗೆ ನಡೆಸಿ ಪೈಶಾಚಿಕ ಕೃತ್ಯವನ್ನು ಎಸಗಿರುವ ಆರೋಪಿಗೆ ತ್ವರಿತ ವಿಚಾರಣೆ ನಡೆಸಿ ಕಾನೂನಾತ್ಮಕವಾಗಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಉಪನ್ಯಾಸಕ ಜಮೀರ್ ಅಹಮದ್ ಮಾತನಾಡಿ, 10 ವರ್ಷದ ಬಾಲಕಿ ಟ್ಯೂಷನ್ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಚಾಕೋಲೆಟ್ ಕೊಟ್ಟು ಪುಸಲಾಯಿಸಿ ಕರೆದೋಯ್ದ ಆರೋಪಿ ಕಾಂತರಾಜು, ಅತ್ಯಾಚಾರವೆಸಗಿ ಕೊಂದು ಹಾಕಿದ್ದಾನೆ. ಸಂಪ್ ಒಳಗೆ ಮೃತದೇಹವನ್ನು ಎಸೆದು ಹೋಗಿದ್ದಾನೆ ಇದು ಸಮಾಜವೇ ತಲೆ ತಗ್ಗಿಸುವಂತಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ಅಧ್ಯಕ್ಷ ಡಾ.ರಾಘವೇಂದ್ರಗೌಡ ಮಾತನಾಡಿದರು.
ಮುಖಂಡರಾದ ಸಂತೋಷ್, ಹೇಮರಾಮ್, ಅಭಿಷೇಕ್, ಕೆ.ಎಸ್.ವಾಸುದೇವ್, ಶ್ರೀನಿವಾಸಮೂರ್ತಿ, ಎಂ.ಡಿ. ಹಾಷಂ, ಕಾಂತರಾಜ್, ಭರತ್ ಇತರರು ಪಾಲ್ಗೊಂಡಿದ್ದರು.