ಕೋಲಾರ: ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಕೋಲಾರದಲ್ಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಸಿಪಿಎಂ, ರೈತ ಸಂಘದ ಒಂದು ಬಣ, ಕಾಂಗ್ರೆಸ್ ಕಿಸಾನ್ ಖೇತ್, ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆ ಮುಖಂಡರು ಬೆಳಗ್ಗೆ 5ಕ್ಕೆ ಕೆಎಸ್‌ಆರ್‌ಟಿಸಿ ಡಿಪೋ ಮುಂಭಾಗ ಜಮಾಯಿಸಿ ಬಸ್‌ಗಳು ರಸ್ತೆಗಿಳಿಯದಂತೆ ತಡೆದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅಲ್ಲಲ್ಲಿ ತೆರೆದಿದ್ದ ಅಂಗಡಿ ಮುಂಗಟ್ಟು ಮುಚ್ಚಿಸಿದರು. ಒಂದು ಗುಂಪು ಬಸ್ ನಿಲ್ದಾಣ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ಆಕ್ಷೇಪಿಸಿದ್ದರಿಂದ ಮಾತಿನ ಚಕಮಕಿ ನಡೆಯಿತಾದರೂ ಪ್ರತಿಭಟನಾಕಾರರು ಪ್ಲೆಕ್ಸ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಾದ್ಯಂತ ಬಹುತೇಕ ಅಂಗಡಿ ಮುಂಗಟ್ಟು, ಹೋಟೆಲ್ ಮುಚ್ಚಿದ್ದವು. ಬೆಳಗ್ಗೆ 11ರ ನಂತರ ವಾಹನ ಸಂಚಾರ ಅಬಾಧಿತವಾಗಿತ್ತು. ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆಯಿತ್ತು. ಮಧ್ಯಾಹ್ನದವರೆಗೆ ವಿವಿಧ ಸಂಘಟನೆ ಮುಖಂಡರು ರ‌್ಯಾಲಿ ನಡೆಸಿ ಮೆಕ್ಕೆ ವೃತ್ತದಲ್ಲಿ ಸಮಾವೇಶಗೊಂಡು ಅಲ್ಲೇ ಧರಣಿ ಕುಳಿತರು.
ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ರೈತ ಸಂಘದ ಮುಖಂಡ ಅಬ್ಬಣಿ ಶಿವಪ್ಪ, ಜೆಎಂಎಸ್ ಉಪಾಧ್ಯಕ್ಷೆ ವಿ.ಗೀತಾ, ಕಿಸಾನ್ ಖೇತ್ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಮುಖಂಡರಾದ ಎಸ್.ಮಂಜುನಾಥ್, ಶ್ರೀರಾಮ್, ವಿಜಯಕೃಷ್ಣ, ಸತೀಶ್, ಮೇಡಿಹಾಳ ರಾಘವೇಂದ್ರ, ಯಲ್ಲಪ್ಪ, ಕಾಂಗ್ರೆಸ್ ಎಸ್‌ಟಿ ಘಟಕ ಜಿಲ್ಲಾಧ್ಯಕ್ಷ ನಾಗರಾಜ ಇತರರು ಪಾಲ್ಗೊಂಡಿದ್ದರು.
ಬಂಧಿತ ಮುಖಂಡರು: ರಾಷ್ಟ್ರೀಯ ಹೆದ್ದಾರಿ-75 ಕೊಂಡರಾಜನಹಳ್ಳಿ ಗೇಟ್ ಬಳಿ ರಸ್ತೆ ತಡೆಗೆ ಮುಂದಾಗಿದ್ದ ವಿವಿಧ ಸಂಘಟನೆ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದರು. ರಸ್ತೆ ತಡೆಗೆ ಅವಕಾಶವಿಲ್ಲ ಎಂದು ಪೊಲೀಸರು ಸೂಚಿಸಿದಾಗ ಸಮಸ್ತ ರೈತ ಸಂಘಟನೆ ಮುಖಂಡ ಕೆ.ಶ್ರೀನಿವಾಸಗೌಡ ಕುಪಿತರಾಗಿ, ಬಂದ್ ಮಾಡಿಸಬೇಡಿ, ಬಸ್ ತಡಿಬೇಡಿ ಅಂತೀರಾ, ರೈತರ ಪರ ಹೋರಾಟ ಹೇಗೆ ಮಾಡಬೇಕು ಎಂದು ವಾದಿಸಿದರು.
ಶಾಂತಿಯುತ ಪ್ರತಿಭಟನೆ ಮಾಡಿ, ರಸ್ತೆಗಳಲ್ಲಿ ಟೈರ್ ಸುಟ್ಟರೆ ಪರಿಸರ ಹಾಳಾಗುತ್ತದೆ, ರಸ್ತೆ ಹಾಳಾದರೆ ಮತ್ತೆ ನೀವೇ ಹೋರಾಟ ಮಾಡ್ತೀರಾ, ಜನರಿಗೆ ತೊಂದರೆ ಕೊಟ್ಟು ಹೋರಾಟ ಮಾಡೋದು ಸರಿಯೇ ಎಂದು ಪೊಲೀಸರು ಬುದ್ಧಿ ಹೇಳಿದರೂ ಹೆದ್ದಾರಿ ಬಂದ್ ಮಾಡಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ಕೆ.ನಾರಾಯಣಗೌಡ ಸೇರಿ 20ಕ್ಕೂ ಹೆಚ್ಚು ಜನರನ್ನು ಬಂಧಿಸಿದರು.
ರೈತ ಸಂಘದ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಎ.ನಳನಿ, ಮುಖಂಡರಾದ ಉಮಾ, ಇ.ನಳನಿ ಅವರನ್ನು ಮಹಿಳಾ ಪೊಲೀಸರು ಪ್ರತ್ಯೇಕ ವಾಹನದಲ್ಲಿ ಗ್ರಾಮಾಂತರ ಠಾಣೆಗೆ ಕರೆದೊಯ್ದು ಬಿಡುಗಡೆ ಮಾಡಿದರು.
ನಂತರ ಕೆ.ನಾರಾಯಣಗೌಡ, ರಾಮು ಶಿವಣ್ಣ, ಈಕಂಬಳ್ಳಿ ಮಂಜುನಾಥ್, ಭಂಗವಾದಿ ನಾಗರಾಜಗೌಡ, ಐತಾಂಡಹಳ್ಳಿ ಮಂಜುನಾಥ್, ಸಹದೇವಪ್ಪ, ಎಪಿಎಂಸಿ ಪುಟ್ಟರಾಜು, ಕನ್ನಡ ರಕ್ಷಣಾ ವೇದಿಕೆ ಮುಖಂಡ ಚಂಬೆ ರಾಜೇಶ್ ಸೇರಿ 20ಕ್ಕೂ ಹೆಚ್ಚು ಜನರನ್ನು ಬಿಡುಗಡೆ ಮಾಡಿದರು.
ಬಂಧಿತರಿಗೆ ಉಪಾಹಾರ: ಬಂಧಿತರಿಗೆ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರಿಂದ ಮುಕ್ತಿ ಹೊಂದಿದ ಪ್ರತಿಭಟನಾಕಾರರು ಮನೆಗಳಿಗೆ ತೆರಳಿದರು. ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಪ್ರಾಣಿಗಳಿಗೆ ನರಕಯಾತನೆ: ಪ್ರತಿಭಟನೆಗಾಗಿ ರೈತ ಮುಖಂಡರು ಕತ್ತೆ, ಕುದುರೆ ಹಾಗೂ ಹಸುಗಳನ್ನು ಕರೆ ತಂದಿದ್ದರು. ಪ್ರಾಣಿಗಳ ಮುಖಕ್ಕೆ ಜನಪ್ರತಿನಿಧಿಗಳ ಮುಖವಾಡ ಹಾಕಲು ಯತ್ನಿಸಿದಾಗ ಪ್ರಾಣಿಗಳು ಬೆಚ್ಚಿ ತಪ್ಪಿಸಿಕೊಳ್ಳಲು ಪರದಾಡಿದವು. ಪ್ರಾಣಿಗಳ ಯಾತನೆ ನೋಡಿದ ಕೆಲವರು ಪ್ರಾಣಿಗಳಿಗೆ ಹಿಂಸೆ ನೀಡುವುದು ಬೇಡ, ಅವುಗಳ ಮುಖಕ್ಕೆ ಮುಖವಾಡ ಹಾಕುವ ಬದಲು ನೀವೇ ಹಾಕಿಕೊಳ್ಳಿ ಎಂದಾಗ, ಮುಖಂಡರು ಮುಖವಾಡ ಹಾಕಿಕೊಂಡು ಪ್ರತಿಭಟನೆ ಮುಂದುವರಿಸಿದರು.
ರೈತರೇ ಸಹಕಾರ ನೀಡುತ್ತಿಲ್ಲ: ರೈತರ ಪರ ನಡೆದ ಬಂದ್‌ನಲ್ಲಿ ರೈತರ ಸಂಖ್ಯೆ ವಿರಳವಾಗಿತ್ತು. ವಿವಿಧ ಸಂಘಟನೆ ಮುಖಂಡರು ಗುಂಪು ಗುಂಪಾಗಿ ವಿವಿಧೆಡೆ ಶಕ್ತಿ ಪ್ರದರ್ಶಿಸಿದರು. ಶ್ರೀನಿವಾಸಪುರ ವೃತ್ತದ ಬಳಿ ನಾಗರಿಕರೊಬ್ಬರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಪ್ರತಿಭಟನಾಕಾರರು ತಡೆದಾಗ ಸಿಟ್ಟಾದ ಬೈಕ್ ಸವಾರ, ನಾನು ಆಸ್ಪತ್ರೆಗೆ ಹೋಗುತ್ತಿರುವೆ, ತಡೆಯಬೇಡಿ, ಅಷ್ಟಕ್ಕೂ ರೈತರ ಪರ ನಡೆಯುತ್ತಿರುವ ಬಂದ್‌ಗೆ ರೈತರೇ ಸಹಕಾರ ನೀಡುತ್ತಿಲ್ಲ ಎಂದು ಕೆಣಕಿದಾಗ ಪರಸ್ಪರ ಮಾತಿನ ಚಕಮಕಿ ನಡೆಯಿತು, ಅಲ್ಲಿದ್ದ ಪೊಲೀಸರು ಮಧ್ಯ ಪ್ರವೇಶಿಸಿ, ಸಮಾಧಾನಪಡಿಸಿದರು.