ಜಿಲ್ಲೆ

ಕರ್ನಾಟಕ ಬಂದ್‌ಗೆ ಹಾಸನದಲ್ಲಿ ಬಂದ್ ಬಹುತೇಕ ಯಶಸ್ವಿ

Hassan - Mohan Kanthur

ಹಾಸನ: ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕನ್ನಡಪರ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಹಾಸನ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೆಡಿಎಸ್, ಬಿಜೆಪಿ, ಹಾಗೂ ವಿವಿಧ ಕನ್ನಡಪರ ಸಂಘಟನೆಗಳು, ವಕೀಲರ ಸಂಘ, ಚಿನ್ನಬೆಳ್ಳಿ ವರ್ತಕರ ಸಂಘ ಸೇರಿದಂತೆ ಇತರೆ ಸಂಘ- ಸಂಸ್ಥೆಗಳ ಕಾರ್ಯಕರ್ತರು ಬೆಳಗ್ಗೆಯಿಂದಲೇ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. ಅಂಗಡಿ ಮುಂಗಟ್ಟುಗಳು ಮತ್ತು ಬೀದಿಬದಿ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಮುಚ್ಚಿದರು. ನಗರದಲ್ಲಿ ಬಂದ್ ಬಹುತೇಕ ಯಶಸ್ವಿಯಾಗಿದೆ.

ನಗರದಲ್ಲಿ ಬೆಳಗಿನಿಂದಲೇ ಬೀದಿಗಿಳಿದ ಹೋರಾಟಗಾರರು, ಬೈಕ್‌ಗಳಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು. ಪ್ರತಿಭಟನೆಗೆ ವರ್ತಕರ ಸಂಘ ಬೆಂಬಲ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಹೋಟೆಲ್, ಹೂ, ಹಣ್ಣು, ತರಕಾರಿ, ಬಟ್ಟೆ ಅಂಗಡಿಗಳು ಸೇರಿದಂತೆ ಬಹುತೇಕ ಅಂಗಡಿ-ಮುಂಗಟ್ಟುಗಳು ಬಾಗಿಲು ತೆರೆಯದೆ ಬೆಂಬಲ ಸೂಚಿಸಿದವು. ಸಾರ್ವಜನಿಕರಿಗೆ ತೊಂದರೆಯಾಗದಂತೆ ನಂದಿನಿ ಹಾಲಿನ ಕೇಂದ್ರಗಳು, ಮೆಡಿಕಲ್ ಶಾಪ್ ಎಂದಿನಂತೆ ತೆರೆದಿದ್ದವು.

ಜನಸಂಖ್ಯೆ ಓಡಾಟ ವಿರಳ

ಖಾಸಗಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಂದ್‌ಗೆ ಸಹಕರಿಸುವಂತೆ ಒತ್ತಾಯಿಸಿದಾಗ ರಜೆ ಘೋಷಣೆ ಮಾಡಲಾಗಿತ್ತು. ಅದರಂತೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ರಜೆ ಇದ್ದ ಕಾರಣ ವಿದ್ಯಾರ್ಥಿಗಳ ಓಡಾಟ ಇರಲಿಲ್ಲ. ಸಾರ್ವಜನಿಕರ ಓಡಾಟ ಹೆಚ್ಚಾಗಿ ಕಂಡು ಬರಲಿಲ್ಲ. ಸರ್ಕಾರಿ ಬಸ್ ಹಾಗೂ ಆಟೋಗಳ ಸಂಚಾರ ಯಥಾಸ್ಥಿತಿ ಇದ್ದರೂ ಬಸ್ ಹಾಗೂ ಆಟೋಗಳಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ವಿರಳವಾಗಿತ್ತು.

ಬಿಜೆಪಿಯಿಂದ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ

ಕರ್ನಾಟಕ ಬಂದ್‌ಗೆ ಬಿಜೆಪಿ ಬೆಂಬಲ ಸೂಚಿಸುವುದರ ಜತೆಗೆ ನಗರದಾದ್ಯಂತ ಬೈಕ್ ರ್ಯಾಲಿ ನಡೆಸಲಾಯಿತು. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಡಿಡಿಪಿಐ ಕಚೇರಿ, ಬ್ಯಾಂಕುಗಳು ಮತ್ತು ಇನ್ನಿತರ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರು ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವುದಲ್ಲದೆ ಈಗ ಪ್ರತಿಭಟನೆಗಳನ್ನ ತಡೆಯುವ ಕೆಲಸವೂ ಕೂಡ ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಎಂದಿನಂತೆ ವಾಹನ ಸಂಚಾರ

ಅಂಗಡಿ-ಮುಂಗಟ್ಟು, ಮಾರುಕಟ್ಟೆ ಸೇರಿದಂತೆ ಇನ್ನಿತರೆ ವ್ಯಾಪಾರ ಮಳಿಗೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಆದರೆ ವಾಹನ ಸಂಚಾರ ಯಥಾಸ್ಥಿತಿಯಲ್ಲಿತ್ತು. ಸಾರ್ವಜನಿಕರು ತಮ್ಮ ಸ್ವಂತ ವಾಹನದಲ್ಲಿ ಎಂದಿನಂತೆ ತಿರುಗಾಡುವ ರೀತಿಯಲ್ಲಿ ತಿರುಗಾಡುತ್ತಿದ್ದರು. ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದರೂ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಓಡಾಡುತ್ತಿದ್ದರು. ಸಾರಿಗೆ ಸಂಪರ್ಕದಲ್ಲಿ ಕೂಡ ಯಾವುದೇ ವ್ಯತ್ಯಯ ಕಂಡುಬರಲಿಲ್ಲ.

ಬಸ್ ನಿಲ್ದಾಣಗಳು ಖಾಲಿ ಖಾಲಿ

ಕರ್ನಾಟಕ ಬಂದ್‌ನಿಂದ ಸಾರಿಗೆ ಬಸ್‌ಗಳ ಸಂಚಾರಕ್ಕೆ ಯಾವುದೇ ತೊಂದರೆ ಆಗಿಲಿಲ್ಲ. ಪ್ರತಿಭಟನಾಕಾರರು ಬಸ್‌ಗಳನ್ನು ತಡೆಯಲು ಯತ್ನಿಸಿದರು. ಆದರೆ ಪೊಲೀಸರು ಅದಕ್ಕೆ ಅವಕಾಶ ಮಾಡಿಕೊಡದೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಆದರೆ ಗ್ರಾಮೀಣ ಭಾಗದಿಂದ ಹೆಚ್ಚಾಗಿ ಸಾರ್ವಜನಿಕರು ನಗರಕ್ಕೆ ಆಗಮಿಸಲಿಲ್ಲ. ಜನರಿಲ್ಲದೆ ನಿಲ್ದಾಣಗಳು ಖಾಲಿ ಹೊಡೆಯುತ್ತಿದ್ದವು. ಬಸ್ಸುಗಳು ಖಾಲಿಯಾಗಿ ಸಂಚರಿಸುತ್ತಿದ್ದವು.

ಪ್ರತಿಭಟನಾಕಾರರ ಬಂಧನ

ಸಾರಿಗೆ ಬಸ್‌ಗಳನ್ನ ಓಡಿಸದಂತೆ ಪ್ರತಿಭಟನಾಕಾರರು ಬಸ್ಸಿಗೆ ಅಡ್ಡಲಾಗಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಸಂಜೆ ವೇಳೆಗೆ ಬಂಧಿತ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಲಾಯಿತು.

ವಕೀಲರ ಸಂಘದಿಂದ ಮಾನವ ಸರಪಳಿ

ಕರ್ನಾಟಕ ಬಂದ್‌ಗೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ವಕೀಲರು ಕೂಡ ಕೋರ್ಟ್ ಕಲಾಪಗಳನ್ನ ಬಹಿಷ್ಕರಿಸಿ ಎನ್‌ಆರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ‘ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು ಸರ್ಕಾರ ರಾಜ್ಯದ ಜನರು ಮತ್ತು ರೈತರ ಹಿತ ಕಾಯಬೇಕು,’ ಎಂದು ಒತ್ತಾಯಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಮಾತಿನ ಚಕಮಕಿ

ನಗರದ ತಣ್ಣೀರುಹಳ್ಳದಲ್ಲಿರುವ ಟಾಟಾ ಮೋಟರ್ಸ್ ಶೋರೂಮ್‌ನಲ್ಲಿ ಸಿಬ್ಬಂದಿ ಎಂದಿನಂತೆ ಕೆಲಸ ನಿರ್ವಹಿಸುತ್ತಿತ್ತು. ನಗರದ ಅಲ್ಲಲ್ಲಿ ತೆರೆದಿದ್ದ ಕೆಲವು ಅಂಗಡಿಗಳನ್ನು ಮುಚ್ಚುವಂತೆ ಅಂಗಡಿ ಮಾಲೀಕರಿಗೆ ಮನವಿ ಮಾಡುತ್ತಿದ್ದರು. ಈ ವೇಳೆ ಶೋ ರೂಮ್ ಬಳಿಗೆ ಬಂದ ಪ್ರತಿಭಟನಾಕಾರರು ಬಾಗಿಲು ಮುಚ್ಚುವಂತೆ ಮನವಿ ಮಾಡಿದರು. ಆದರೆ, ಶೋ ರೂಮ್ ಮ್ಯಾನೇಜರ್ ಬಾಗಿಲು ಮುಚ್ಚಲು ಒಪ್ಪಲಿಲ್ಲ. ಇದರಿಂದಾಗಿ ಕೆಲ ಸಮಯ ಪ್ರತಿಭಟನಾಕಾರರು ಮತ್ತು ಮ್ಯಾನೇಜರ್ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪ್ರತಿಭಟನಾಕಾರರು ಶೋ ರೂಮ್ ಮುಂದೆ ಧರಣಿ ನಡೆಸಲು ಮುಂದಾದಾಗ ಅನಿವಾರ್ಯವಾಗಿ ಶೋರೂಮ್ ಬಾಗಿಲು ಮುಚ್ಚಲಾಯಿತು.

ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್:

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಹಲವು ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೂಡ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ನಗರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು. ಎಲ್ಲಿ ನೋಡಿದರೂ ಕೂಡ ಕಾಕಿ ಪಡೆ ಕರ್ತವ್ಯ ನಿರ್ವಹಿಸುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಲ್ಲದೆ ಹೇಮಾವತಿ ಜಲಾಶಯದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿತ್ತು.