ಹಾಸನ: ಕಾವೇರಿ ವಿಚಾರವಾಗಿ ಶುಕ್ರವಾರ ಕನ್ನಡಪರ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಕೂಡ ಜೆಡಿಎಸ್, ಕಸಾಪ ಸೇರಿದಂತೆ ವಿವಿಧ ಸಂಘಟನೆಗಳು ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿ ನಡೆಸಿ ಬೆಂಬಲ ಸೂಚಿಸಿದ್ದಾರೆ.
ಮೊದಲು ಸುದ್ದಿಗೋಷ್ಠಿ ನಡೆಸಿದ ಕನ್ನಡಪರ ಒಕ್ಕೂಟಗಳ ಪದಾಧಿಕಾರಿಗಳು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಿರುವ ಬಂದ್‌ಗೆ ಜಿಲ್ಲೆಯ ಐವತ್ತಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದು ಸಾರ್ವಜನಿಕರು ಮತ್ತು ಇನ್ನಿತರ ಸಂಘ ಸಂಸ್ಥೆಗಳು ಸಹಕಾರ ನೀಡುವಂತೆ ಮನವಿ ಮಾಡಿದರು.
ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ನೀರು ಸಿಗದೆ ಬೆಳೆಗಳು ಒಣಗುತ್ತಿವೆ. ರಾಜ್ಯದ ಜನರಿಗೂ ಕುಡಿಯುವ ನೀರಿಲ್ಲದ ಸ್ಥಿತಿ ಬರಲಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸದಂತೆ ಒತ್ತಾಯಿಸಿ ಜಿಲ್ಲೆಯಲ್ಲಿರುವ ಹಲವು ಕನ್ನಡ ಪರ ಸಂಘಟವನೆಗಳು ಸೇರಿದಂತೆ ಇತರೆ ಸಂಘ ಸಂಸ್ಥೆಗಳು ಬಂದ್‌ಗೆ ಬೆಂಬಲ ನೀಡಿವೆ ಎಂದು ತಿಳಿಸಿದರು.
ರಾಜಕೀಯವನ್ನು ಬದಿಗೊತ್ತಿ ನಮ್ಮ ರಾಜ್ಯದ ಸಂಸದರು ಕೂಡ ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲು ಆಗ್ರಹಿಸಬೇಕು. ಸರ್ಕಾರಿ ನೌಕರರು, ಹೋಟೇಲ್ ಅಂಗಡಿ ಮುಗ್ಗಟ್ಟುಗಳ ಮಾಲಿಕರು, ಹೂ ವ್ಯಾಪಾರಿಗಳು ಸಹ ಕಾವೇರಿ ಉಳಿವುಗಾಗಿ, ರಾಜ್ಯದ ರೈತರ ಒಳಿತಿಗಾಗಿ ಬಂದ್‌ಗೆ ಸಹಕರಿಸಿ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.
ಸರ್ಕಾರ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಮೂಲಕ ನಮ್ಮ ಹೋರಾಟವನ್ನು ಹತ್ತಿಕ್ಕುತ್ತೇವೆ ಎಂದುಕೊಂದಿದ್ದರೆ ಅದು ಸಾಧ್ಯವಿಲ್ಲ. ನಮ್ಮ ರಾಜ್ಯದ ರೈತರಿಗಾಗಿ ಈ ನೆಲ,ಜಲಕ್ಕಾಗಿ ನಾವು ಹೋರಾಟ ಮಾಡಲು ಸಿದ್ದರಿದ್ದು, ಯಾವುದಕ್ಕೂ ಎದುರುವುದಿಲ್ಲ ಎಂದರು.
ಇಂದು ಬೆಳಗ್ಗೆ ನಗರದ ಕನ್ನಡ ಸಾಹಿತ್ಯ ಪರಿಷತ್ ಬಳಿ ಎಲ್ಲಾ ಸಂಘ ಸಂಸ್ಥೆಗಳು ಒಟ್ಟಾಗಿ ಸೇರಿ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಪ್ರತಿಭಟನ ಮೆರವಣಿ ಸಾಗಿ, ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ನೀಡಲಾಗುವುದು. ಬಂದ್ ಶಾಂತಿಯುತವಾಗಿ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಯ ಮುಂಖಡರಾದ ಸತೀಶ್ ಪಟೇಲ್, ದಿನೇಶ ಗೌಡ, ಶಂಕರ್ ಗೌಡ,ಕಿಶೋರ್ ಕುಮಾರ್,ವೆಂಕಟೇಶ್ ಇದ್ದರು.
ಜೆಡಿಎಸ್ ಬೆಂಬಲ:
ಹಾಸನ: ಕಾವೇರಿ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್‌ಗೆ ಜೆಡಿಎಸ್ ಪಕ್ಷದ ವತಿಯಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್.ದ್ಯಾವೇಗೌಡ ತಿಳಿಸಿದರು.
ಪಕ್ಷದ ವರಿಷ್ಠರ ಸೂಚನೆಯಂತೆ ಬಂದ್‌ಗೆ ಸಂಪೂರ್ಣ ಬೆಂಬಲ ಸೂಚಿಸಲಾಗಿದೆ. ಅಲ್ಲದೆ ಪ್ರತಿಭಟನೆಯಲ್ಲಿ ಕೂಡ ಭಾಗವಹಿಸಲಾಗುವುದು, ನಮ್ಮ ಪಕ್ಷ ನೆಲ, ಜಲ, ಭಾಷೆ ವಿಚಾರದಲ್ಲಿ ಯಾವಾಗಲೂ ಕನ್ನಡಿಗರ ಪರವಾಗಿರುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಕ್ಬರ್,ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಸತೀಶ್ , ಜೆಡಿಎಸ್ ವಕ್ತಾರ ರಘು ಹೊಂಗೆರೆ,ಎಪಿಎಂಸಿ ನಿರ್ದೇಶಕರಾದ ಮಹೇಶ್ ಹಾಗೂ ಮುಖಂಡ ವಿಶ್ವನಾಥ್ ಇದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಂಬಲ:
ಹಾಸನ : ಕಾವೇರಿಗಾಗಿ ಹೋರಾಟ ಮಾಡುವುದು ನಮ್ಮೇಲ್ಲರ ಹೊಣೆಗಾರಿಗೆ. ಇಂದು ಕರ್ನಾಟಕ ಬಂದ್‌ಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೂಡ ಬೆಂಬಲ ನೀಡಲಿದೆ. ಹೋರಾಟದಲ್ಲಿ ನಾವುಗಳು ಭಾಗವಹಿಸುತ್ತೇವೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್‌ಗೌಡ ಅವರು ತಿಳಿಸಿದರು.
ಪರಿಷತ್ತಿನ ಮೂಲದ್ದೇ ಉದ್ದೇಶ ನೆಲ,ಜಲ, ಭಾಷೆ, ಗಡಿ ವಿಚಾರದಲ್ಲಿ ತೊಂದರೆ ಉಂಟಾದರೆ ಪರಿಷತ್ತು ಯಾವಾಗಲೂ ಕನ್ನಡಿಗರ ಪರವಾಗಿ ಧ್ವನಿ ಎತ್ತುತ್ತಾ ಬಂದಿದೆ. ಅದೇ ರೀತಿ ಇದೀಗ ಕಾವೇರಿ ವಿಚಾರದಲ್ಲಿ ರಾಜ್ಯದ ಪರವಾಗಿ ನಿಲ್ಲುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ರಾಜ್ಯಕ್ಕೆ ಕಠಿಣ ಪರಿಸ್ಥಿತಿ ಬಂದೊದಗಿದೆ. ನಾಡಿಗೆ ಅನ್ಯಾಯವಾಗಿ ರೈತರು ಸಂಕಷ್ಟ ಎದುರಿಸುತಿದ್ದಾರೆ. ನಾವು ಯಾವ ಸರ್ಕಾರದ ವಿರುದ್ಧ ಹೋರಟ ಮಡುತ್ತಿಲ್ಲ. ರಾಜ್ಯದ ಹಾಗೂ ಜಿಲ್ಲೆಯ ರೈತರಿಗೆ ಆಗುತ್ತಿರುವ ಅನ್ಯಾಯ ಮತ್ತು ಬದಲಾಗುತ್ತಿರುವ ವಿಧ್ಯಾಮಾನದ ವಿರುದ್ಧ ನಮ್ಮ ಹೋರಾಟ. ಕೇವಲ ಕನ್ನಡಪರ ಸಂಘಟನೆಗಳು ಮಾತ್ರವಲ್ಲದೆ, ಈ ನೆಲದಲ್ಲಿ ಇರುವ ಪ್ರತಿಯೊಬ್ಬರು ಕೂಡ ಬೆಂಬಲಕ್ಕೆ ನಿಲ್ಲಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಪದಾಧಿಕಾರಿಗಳಾದ ಬಿ.ಆರ್.ಬೊಮ್ಮೇಗೌಡ, ಚಂದ್ರಶೇಖರ್,ಶಂಕರ್ ಹಾಜರಿದ್ದರು