ಜಿಲ್ಲೆ

ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳ ಬೆಂಬಲ

ಚಿತ್ರದುರ್ಗ: ಕಾವೇರಿ ವಿಚಾರವಾಗಿ ಸೆ. 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಕ್ರಮಕ್ಕೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ನಡೆದ ಸಭೆಯಲ್ಲಿ ಬೆಂಬಲ ನೀಡಲು ತೀರ್ಮಾನಿಸಿದರು.

ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾ ಅಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿ, ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಕಾರಣ ರಾಜ್ಯದ ಜನ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಳ್ಮೆ ಕೆಣಕುವುದು ಸರಿಯಲ್ಲ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಎರಡು ರಾಜ್ಯಗಳ ನಡುವೆ ಉಂಟಾಗಿರುವ ಜಲ ಸಮಸ್ಯೆಗೆ ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮದ್ರಾಸ್ ಪ್ರಾಂತ್ಯಕ್ಕೆ ಕರ್ನಾಟಕ ಒಳಗಾಗಿದ್ದ ವೇಳೆ 1932ರಲ್ಲಿ ಇಷ್ಟಾನುಸಾರ ಒಪ್ಪಂದ ಮಾಡಿಕೊಂಡು ಅಂದಿನಿಂದ ಪ್ರತಿ ವರ್ಷ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ. ಜಲ ವಿವಾದ ಬಗೆಹರಿಸುವ ಪ್ರಯತ್ನ ಯಾರೂ ಮಾಡುತ್ತಿಲ್ಲ. ಹೀಗಾಗಿ ರಾಜ್ಯಗಳ ನಡುವೆ ಕಂದಕ ಸೃಷ್ಟಿಯಾಗಿದೆ ಎಂದು ಬೇಸರಿಸಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅವೈಜ್ಞಾನಿಕ ಆದೇಶದಿಂದ ರಾಜ್ಯದ ಜನತೆಯಲ್ಲಿ ರೋಷ ಉಕ್ಕಿ ಹರಿಯುತ್ತಿದೆ. ನೀರಿಲ್ಲದಿದ್ದರೂ ನಿತ್ಯ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸುವ ಕ್ರಮ ಖಂಡಿಸಿ ಬಂದ್‌ಗೆ ಬೆಂಬಲ ಸೂಚಿಸಲಾಗುತ್ತಿದೆ ಎಂದರು.

ವರ್ಷಕ್ಕೆ ತಮಿಳುನಾಡಿಗೆ ಮೂರು, ಕರ್ನಾಟಕಕ್ಕೆ ಒಂದು ಬೆಳೆ. ಇದು ಯಾವ ರೀತಿಯ ಒಪ್ಪಂದ. ರಾಜ್ಯದ ಪಾಲಿಗೆ ಇದೊಂದು ಕರಾಳ ಶಾಸನವಾಗಿದೆ. ನ್ಯಾಯಾಲಯದ ಆದೇಶ ಪಾಲನೆಗಿಂತಲೂ ಮುಖ್ಯವಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ, ಜಲಾಶಯದ ವಸ್ತುಸ್ಥಿತಿ ಏಕೆ ಮನವರಿಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಪ್ರಾಧಿಕಾರ ಮೊದಲಿನಿಂದಲೂ ತಮಿಳುನಾಡು ಪರ ತೀರ್ಮಾನ ನೀಡುತ್ತ ಬಂದಿದೆ. ಆದ್ದರಿಂದ ನೀರು ಹಂಚಿಕೆಯಲ್ಲಿ ನೈಸರ್ಗಿಕ ನ್ಯಾಯ ತಪ್ಪಿದೆ. ಎಸ್.ಬಂಗಾರಪ್ಪ ಅವರು ರಾಜ್ಯದ ಸಿಎಂ ಆಗಿದ್ದಾಗ ಸುಗ್ರಿವಾಜ್ಞೆ ಮೂಲಕ ನೀರು ಹರಿಸುವುದನ್ನು ನಿಲ್ಲಿಸಲು ಮುಂದಾದರೋ ಆ ದಿಟ್ಟತನ ಪ್ರದರ್ಶಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಜಿ.ಸಿ.ಸುರೇಶ್‌ಬಾಬು, ಬಿ.ಬಸವರಾಜಪ್ಪ, ಧನಂಜಯ ಹಂಪಯ್ಯನಮಾಳಿಗೆ, ರುದ್ರಸ್ವಾಮಿ, ಮಹಾಂತೇಶ್, ಜೆ.ಮಂಜುನಾಥ್, ವೈ.ಕುಮಾರ್, ಈ.ಸತ್ಯಕೀರ್ತಿ, ಸಿ.ಕೆ.ಗೌಸ್‌ಪೀರ್, ರಾಜಪ್ಪ, ಕರಿಬಸಣ್ಣ ಇತರರಿದ್ದರು.