ಮೈಸೂರು
ನಗರದ ನಗಾರಿ ವಾದಕ ಸಿ.ಮಂಜುನಾಥ್ ಅವರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಇವರು ಪಾತ್ರರಾಗಿದ್ದು, ಪ್ರಶಸ್ತಿ ಮೊತ್ತ 25 ಸಾವಿರ ರೂ. ಆಗಿದೆ.
‘ಮೆರವಣಿಗೆಗಳು, ಕಾರ್ಯಕ್ರಮಗಳಲ್ಲಿ ನಗಾರಿಯನ್ನು ಬಾರಿಸುವ ಕಲಾವಿದರನ್ನು ಸರ್ಕಾರ ಗುರುತಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆ ತಂದುಕೊಟ್ಟಿದೆ’ ಎಂದು ಮಂಜುನಾಥ್ ಸಂತೋಷ ವ್ಯಕ್ತಪಡಿಸಿದರು.
‘ಸುಮಾರು 37 ವರ್ಷದಿಂದ ನಗಾರಿ ಬಾರಿಸಿಕೊಂಡು ಬಂದಿರುವೆ. ಈ ಕಲೆಯು ಮುಂದಿನ ಪೀಳಿಗೆಗೂ ಮುಂದುವರಿಯಬೇಕು ಎಂಬ ಸದಾಶಯದಿಂದ ಯುವಕರಿಗೆ, ಚಿಕ್ಕ ಮಕ್ಕಳಿಗೆ ನಗಾರಿ ಬಾರಿಸುವುದನ್ನು ಕಲಿಸಿಕೊಡುತ್ತಿರುವೆ. ನಾವುಗಳೆಲ್ಲ ಒಂದು ತಂಡವನ್ನು ಕಟ್ಟಿಕೊಂಡು ಕಾರ್ಯಕ್ರಮಗಳನ್ನು ನೀಡುತ್ತಿದ್ದೇವೆ’ ಎಂದು ತಿಳಿಸಿದರು.
ನಗರದ ಪುಲಿಕೇಶಿ ರಸ್ತೆಯ ನಿವಾಸಿ ಮಂಜುನಾಥ್ ಅವರು ಆದಿದ್ರಾವಿಡ ತಮಟೆ ಮತ್ತು ನಗಾರಿ ಸಾಂಸ್ಕೃತಿಕ ಕಲಾವೃಂದ ಎಂಬ ತಂಡವನ್ನು ಸಂಘಟಿಸಿದ್ದಾರೆ. ತಮಟೆ, ನಗಾರಿ ಬಾರಿಸುವ ಕಲೆ ಪ್ರದರ್ಶನವನ್ನು ದೇಶ ವಿದೇಶಗಳಲ್ಲೂ ನೀಡಿದ್ದಾರೆ. ಇವರಿಗೆ ಈ ಜಾನಪದ ಕಲೆ ವಂಶಪಾರಂಪರ‌್ಯದ ಬಳುವಳಿ. ಈ ಕಲೆ ಕಲಿತವರಲ್ಲಿ ಇವರು 5ನೇ ತಲೆಮಾರಿನವರು. ಇವರ ಕಲಾ ಸೇವೆಯನ್ನು ಗುರುತಿಸಿ ಇದೀಗ ಪ್ರಶಸ್ತಿ ದೊರೆತಿದೆ.
ಕಳೆದ ವರ್ಷ 300 ಪೌರ ಕಾರ್ಮಿಕರ ಮಕ್ಕಳಿಗೆ ಸಾಂಸ್ಕೃತಿಕ ಜಾನಪದ ತರಬೇತಿ ಶಿಬಿರ ಆಯೋಜಿಸಿ ತರಬೇತಿ ಕೊಟ್ಟಿದ್ದಾರೆ. ಜತೆಗೆ ಜಾನಪದ ಕಲೆಗಳಾದ ಬೀಸುಕಂಸಾಳೆ, ಪಟದ ಕುಣಿತ, ನಗಾರಿ, ಡೊಳ್ಳು ಕುಣಿತ, ಕೋಲಾಟ, ಕರಗ ಕೋಲಾಟ ಲಂಬಾಣಿ ನೃತ್ಯ ತಮಟೆ ಜಾನಪದ ನೃತ್ಯ ಜಾನಪದ ಹಾಡು, ಮಲ್ಲಕಂಬ ತರಬೇತಿಯನ್ನೂ ನೀಡುತ್ತಾರೆ. ಇವರ ಸೇವೆಯನ್ನು ಪರಿಗಣಿಸಿ ಹಲವಾರು ಸಂಘ-ಸಂಸ್ಥೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ ಇತರ ಸಂಘ ಸಂಸ್ಥೆಗಳು ಗೌರವಿಸಿವೆ.