ಮದ್ದೂರು: ದಾಸನಪುರ ಎಪಿಎಂಸಿಯಲ್ಲಿ ನಡೆಯುತ್ತಿದ್ದ ಕಮಿಷನ್ ದಂಧೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೇ ಮಹಿಳಾ ಕಾರ್ಯಕರ್ತೆಯರನ್ನು ಪೊಲೀಸ್ ಅಧಿಕಾರಿಗಳು ನಡೆಸಿಕೊಂಡ ರೀತಿ ಅಮಾನವೀಯವಾಗಿದೆ ಎಂದು ಆರೋಪಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ನಗರದ ಪ್ರವಾಸಿ ಮಂದಿರದ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಮಾತನಾಡಿ, ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಎಸಗಿರುವುದು ಖಂಡನೀಯ. ಅದರಲ್ಲೂ ಮಹಿಳಾ ಪ್ರತಿಭಟನಾಕಾರರ ಮೇಲೆ ಮೃಗೀಯ ವರ್ತನೆ ತೋರಿರುವುದು ಅಮಾನುಷ. ಬಂಡವಾಳಶಾಹಿಗಳ ಜತೆ ಸೇರಿ ಪ್ರತಿಭಟನೆ ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿರುವುದು ಪೊಲೀಸರ ಅನುಚಿತ ವರ್ತನೆಯನ್ನು ಬಿಂಬಿಸಿದೆ ಎಂದು ಕಿಡಿಕಾರಿದರು.
ಇಂತಹ ಘಟನೆ ಖಂಡಿಸಿರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಸಮಯೋಚಿತ ನಿರ್ಧಾರ ಕೈಗೊಂಡು ತನಿಖೆಗೆ ಶಿಫಾರಸು ಮಾಡಿರುವುದು ಸ್ವಾಗತಾರ್ಹ ಎಂದರು.
ರೈತ ಮುಖಂಡ ಸೊ.ಶಿ.ಪ್ರಕಾಶ್ ಮಾತನಾಡಿ, ತನಿಖೆಗೂ ಮುಂಚಿತವಾಗಿ ಮಾದನಾಯಕನಹಳ್ಳಿ ಠಾಣೆಯ ಮುರಳೀಧರ್ ಹಾಗೂ ನೆಲಮಂಗಲದ ಠಾಣಾಧಿಕಾರಿ ನರೇಂದ್ರ ಬಾಬು ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಯರಗನಹಳ್ಳಿ ಮಹಾಲಿಂಗ, ಸೋಂಪುರ ಉಮೇಶ್, ವಿಶ್ವಾಸ್, ಪ್ರಭು, ಸೋಮಶೇಖರ್, ಪುಟ್ಟಸ್ವಾಮಿ, ಎಂ.ವೀರಪ್ಪ, ಆಲೂರು ಚೆನ್ನಪ್ಪ, ನಾರಾಯಣ, ಸೋಮಶೇಖರ್, ಬ್ಯಾಂಕ್ ಚಿಕ್ಕಣ್ಣ ಇದ್ದರು.