ಜಿಲ್ಲೆ

ಕರ್ನಾಟಕ ಗ್ರಾಮೀಣ ಬ್ಯಾಂಕ್ ವಿರುದ್ಧ ಪ್ರತಿಭಟನೆ

ಗುಂಡ್ಲುಪೇಟೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಂಗಳವಾರ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಯಿತು.

ಸಂಘಟನೆ ಮುಖಂಡ ಡಾ.ಗುರುಪ್ರಸಾದ್ ಮಾತನಾಡಿ, ಬ್ಯಾಂಕ್ ತನ್ನ ಗ್ರಾಹಕರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನೂ ನೀಡದೆ ರೈತ ವಿರೋಧಿಯಾಗಿದೆ. ಪಿಂಚಣಿ ಹಣ, ಬರ ಪರಿಹಾರ ಹಣ, ಬೆಳೆ ವಿಮೆ ಹಣ, ಗೃಹಲಕ್ಷ್ಮಿ ಹಣ, ಹಾಲಿನ ಸಹಾಯಧನ ಇನ್ನಿತರ ಹಣವನ್ನು ರೈತರಿಗೆ ನೀಡುತ್ತಿಲ್ಲ. ಸರ್ಕಾರದ ಆದೇಶ ಇದ್ದರೂ ಆ ಹಣವನ್ನು ಸಾಲಕ್ಕೆ ವಜಾ ಮಾಡಿಕೊಂಡು ರೈತರು ದಿನನಿತ್ಯದ ಖರ್ಚಿಗೂ ಕೂಡ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ದೂರಿದರು.

ಒಟಿಪಿ ಮಾಡಲು ಬೇರೆ ಬ್ಯಾಂಕ್‌ಗಳ ರೀತಿ ಶೇ. 10, 20ರಲ್ಲಿ ಮುಗಿಸದೆ ಶೇ.80 ರಿಂದ 90 ಪರ್ಸೆಂಟ್ ಹಣ ಕಟ್ಟಬೇಕು ಎಂದು ರೈತರಿಗೆ ತಾಕಿತು ಮಾಡಲಾಗುತ್ತಿದೆ. ಇದನ್ನು ಒಪ್ಪದ ರೈತರಿಗೆ ಲಾಯರ್ ನೋಟಿಸ್‌ಗಳನ್ನು ಕಳಿಸಿ ಮಾನಸಿಕ ಕಿರುಕುಳವನ್ನು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಯಸೂಚಿಯಂತೆ ಕಾರ್ಯನಿರ್ವಹಿಸಬೇಕು ಮತ್ತು ಸಾರ್ವಜನಿಕರು ಹಾಗೂ ರೈತರಿಗೆ ಕಿರುಕುಳ ನೀಡಿದರೆ ಶಾಖೆ ವರ್ಗಾವಣೆ ಮಾಡುವವವರೆಗೂ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾಧ್ಯಕ್ಷ ಮಾಡ್ರಳ್ಳಿ ಮಹದೇವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂದಕೆರೆ ಸಂಪತ್ತು, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಕೆಎಸ್ ಮಹೇಶ್, ಜಿಲ್ಲಾ ಉಪಾಧ್ಯಕ್ಷ ಹಾಲಹಳ್ಳಿ ಮಹೇಶ, ಹಸಿರು ಸೇನೆ ಕಾರ್ಯದರ್ಶಿ ದಡದಹಳ್ಳಿ ಮಹೇಶ್, ಹಕ್ಕಲಪುರ ಕುಮಾರ್, ಮಹೇಶ್ ಶಿಂಡನಪುರ, ರಘು ದಡದಹಳ್ಳಿ, ಬಸವರಾಜು, ಮುದ್ದಪ್ಪ, ಕುಮಾರ, ಮಂಜು, ಬಸವಣ್ಣ, ಮಹೇಶ್, ಸೋಮು, ಪ್ರಕಾಶ್ ಸೇರಿದಂತೆ ಹಲವರು ಇದ್ದರು.