ಹೊಳೆನರಸೀಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಕಂದಾಯ ಇಲಾಖೆಯೊಂದಿಗೆ ಶಿಕ್ಷಕರು ಅತ್ಯುತ್ತಮವಾಗಿ ಸಹಕಾರ ನೀಡುತ್ತಿರುವುದರಿಂದ ಚುನಾವಣೆಗಳು ಸುಲಲಿತವಾಗಿ ನಡೆಯುತ್ತಿದೆ ಎಂದು ತಾಲೂಕು ಚುನಾವಣಾಧಿಕಾರಿ ಮಹಮದ್ ನಯೀಮ್ ಮೊಹಿನ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಚುನಾವಣಾ ಸಿಬ್ಬಂದಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ತರಬೇತಿ ಪಡೆಯುತ್ತಿರುವವರಲ್ಲಿ ಅನೇಕರು ಈಗಾಗಲೇ ಅನೇಕ ಚುನಾವಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೀರಿ. ಹೊಸಬರು ನಿಮಗೆ ನೀಡಿರುವ ಚುನಾವಣೆ ಕೈಪಿಡಿಯನ್ನು ಚೆನ್ನಾಗಿ ಓದಿ ಅರ್ಥ ಮಾಡಿಕೊಂಡು, ಅನುಮಾನಗಳಿದ್ದರೆ ಈ ತರಬೇತಿಯಲ್ಲಿ ಹಾಗೂ ಚುನಾವಣೆಗೆ ಮುನ್ನ ನೀಡುವ ಮತ್ತೊಂದು ತರಬೇತಿಯಲ್ಲಿ ಪರಿಹರಿಸಿಕೊಂಡು ಉತ್ತಮವಾಗಿ ನಿಮಗೆ ನೀಡಿರುವ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿ ಎಂದು ತಿಳಿಸಿದರು.
ಮಾಸ್ಟರ್ ಟ್ರೇನರ್ ಗಿರೀಶ್ ಮಾತನಾಡಿ, ಸರ್ಕಾರ ಮತ್ತು ಚುನಾವಣಾ ಆಯೋಗ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಗುಜರಾತ್‌ನಲ್ಲಿ ಬೆಟ್ಟದ ಮೇಲಿರುವ ಒಬ್ಬ ವ್ಯಕ್ತಿಯ ಮತಕ್ಕಾಗಿ ಸಿಬ್ಬಂದಿ 10 ಕಿ.ಮೀ. ಕುದುರೆ ಮೇಲೆ ಪ್ರಯಾಣಿಸಿ 2 ಕಿ.ಮೀ. ನಡೆದು ಹೋಗಿ ಮತದಾನಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಒಬ್ಬ ವ್ಯಕ್ತಿಯ ಮತವೂ ಅಮೂಲ್ಯ ಎಂದು ಸರ್ಕಾರ ಪರಿಗಣಿಸಿದೆ. ಆದ್ದರಿಂದ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ತಪ್ಪದೆ ಮತ ಚಲಾಯಿಸಿ ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಎಸ್.ವಿಶ್ವನಾಥ್, ಇಒ ಗೋಪಾಲ್, ಮಾಸ್ಟರ್ ಟ್ರೈನರ್ ಗಿರೀಶ್, ಪ್ರಭುಶಂಕರ್, ಎಇಇ ಪ್ರಶಾಂತ್, ಪ್ರಾಂಶುಪಾಲ ಕಿರಣ್‌ರಾವತ್, ಕುಮಾರಸ್ವಾಮಿ ಇದ್ದರು.