ಬೈಲಹೊಂಗಲ: ಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸಲು ವಿಳಂಬ ಮಾಡುವ, ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಎಚ್ಚರಿಸಿದರು.
ಪಟ್ಟಣದ ತಹಸೀಲ್ದಾರ್ ಸಭಾಭವನದಲ್ಲಿ ಬುಧವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಎಲ್ಲ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸಿದರೆ ಜನರು ನಮ್ಮನ್ನು ಒಳ್ಳೆಯ ಅಧಿಕಾರಿ ಎಂದು ಪ್ರಶಂಸಿಸುತ್ತಾರೆ. ಈ ನಿಟ್ಟಿನಲ್ಲಿ ಎಲ್ಲರೂ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ಮಾತನಾಡಬೇಕು. ನಾವು ಆಡುವ ಪ್ರತಿಯೊಂದು ಮಾತು ಅವರಿಗೆ ಸಂಪೂರ್ಣವಾಗಿ ತಿಳಿವಳಿಕೆ ನೀಡುವಂತಿರಬೇಕು. ಯಾವುದೇ ಸಮಸ್ಯೆ ಇದ್ದರೂ ಜನತೆ ತಮ್ಮನ್ನು ನೇರವಾಗಿ ಸಂಪರ್ಕಿಸುವಂತೆ ಮನವಿ ಮಾಡಿದರು.
ಗ್ರಾಮೀಣ ಭಾಗದಲ್ಲಿ ಸ್ಮಶಾನ ಕೊರತೆ ಕುರಿತು ದೂರುಗಳು ಬರುತ್ತಿದ್ದು ಸರ್ಕಾರಿ ಜಮೀನು ಇಲ್ಲದಿದ್ದರೆ ಖಾಸಗಿಯವರಿಗೆ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚು ದರ ನೀಡಿ ಜಾಗ ಪಡೆಯಲಾಗುವುದು. ಪ್ರತಿಯೊಂದು ಇಲಾಖೆಯಲ್ಲಿ ಸಾರ್ವಜನಿಕರಿಗೆ ನೀಡುವ ಸೇವೆಗಳಿಗೆ ದರಪಟ್ಟಿ ಬೋರ್ಡ್ ಕಡ್ಡಾಯವಾಗಿ ಆಳವಡಿಸಬೇಕು. ಸಕಾಲದಲ್ಲಿ ನಮ್ಮ ಜಿಲ್ಲೆ ನಂ.1 ಸ್ಥಾನ ಪಡೆಯಲು ಅಧಿಕಾರಿಗಳು ಮುರ್ತುವಜಿಯಾಗಿ ಕೆಲಸ ನಿರ್ವಹಿಸಬೇಕು. ಸಿಂಧುತ್ವದ ಕೆಲಸ ತ್ವರಿತಗತಿಯಲ್ಲಿ ಸಾಗಬೇಕು. ಹೋಬಳಿ ಮಟ್ಟದ ಕಾರ್ಯಗಳು ಚುರುಕಾಗಬೇಕು. ಪ್ಲಾಸ್ಟಿಕ್ ನಿರ್ಮೂಲನೆಗೆ ಹೆಚ್ಚಿನ ಒತ್ತು ನೀಡಬೇಕು. ಮುಂಗಾರು ಹಂಗಾಮಿಗೆ ಬಿತ್ತನೆಗೆ ರಸಗೊಬ್ಬರ, ಬೀಜ, ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಸರ್ಕಾರ ಮಾರುಕಟೆಯಲ್ಲಿ ನಿಗದಿಪಡಿಸಿದ ದರದಲ್ಲಿಯೇ ಮಾರಾಟ ಮಾಡಬೇಕು. ಒಂದು ವೇಳೆ ದುಪ್ಪಟ್ಟು ದರ ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚಿಸಿದರು. ಚುನಾವಣೆ ನೀತಿ ಸಂಹಿತೆಯನ್ನು ಅಚ್ಚುಕಟ್ಟಾಗಿ ಪಾಲಿಸಬೇಕು. 464 ಕಡತ ವಿಲೇವಾರಿಯಾಗದೆ ಹಾಗೇ ಉಳಿದಿದ್ದು ಇವುಗಳನ್ನು ತಕ್ಷಣ ಇತ್ಯರ್ಥಗೊಳಿಸಿ ವರದಿ ಸಲ್ಲಿಸಲು ಸೂಚಿಸಿದರು. ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವ ಬಾಲಕಿಯೋರ್ವಳಿಗೆ ತಕ್ಷಣ ಆಧಾರ್ ಕಾರ್ಡ್ ವಿತರಿಸಿದರು.
ಅಹವಾಲು ಸ್ವೀಕಾರ: ಹಣಬರಟ್ಟಿ ಗ್ರಾಮದ ಬಸವರಾಜ ಹಣಬರಟ್ಟಿ ಅವರು ವಾರಸಾ ಪ್ರಮಾಣ ಪತ್ರ ಸಲ್ಲಿಸಿ 6 ತಿಂಗಳು ಗತಿಸಿದರೂ ಅವರಿಗೆ ವಾರಸಾ ಪ್ರಮಾಣ ಪತ್ರ ನೀಡಿಲ್ಲ ಎಂದು ಅವರ ಪರ ವಕೀಲ ಆನಂದ ತುರಮರಿ ದೂರು ಸಲ್ಲಿಸಿದರು. ಅಮಟೂರ ಗ್ರಾಪಂ 2010 ನೇ ಸಾಲಿನಲ್ಲಿ ಆಶ್ರಯ ಮನೆಯ ಅವ್ಯವಹಾರವಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳಲು ಸೂಚಿಸಿದರೆ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಲಿತ ಮುಖಂಡ ಪುಂಡಲೀಕ ಭಜಂತ್ರಿ, ಸಂಜು ಮುರಗೋಡ ಜಿಲ್ಲಾಧಿಕಾರಿ ಗಮನ ಸೆಳೆದಾಗ ತಕ್ಷಣ ತಾಪಂ ಇಒಗೆ ಗ್ರಾಪಂ ಅಧ್ಯಕ್ಷರ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಿದರು.
ತಾಕೀತು: ಅಧಿಕಾರಿಗಳು ಪ್ರತಿದಿನ ಕಡ್ಡಾಯವಾಗಿ ಸಾರ್ವಜನಿಕರ ಭೇಟಿಗೆ ಸಮಯ ಮೀಸಲಿಡಬೇಕು. ಸ್ಪಂದಿಸದಿದ್ದರೆ ಜಿಲ್ಲಾಮಟ್ಟಕ್ಕೆ ದೂರುಗಳು ಬರುತ್ತವೆ. ಕಡತ ಬಾಕಿ ಉಳಿಯದಂತೆ ವಿಲೇವಾರಿ ಮಾಡಬೇಕೆಂದು ತಾಕೀತು ಮಾಡಿದರು. ತಹಸೀಲ್ದಾರ್ ಕಚೇರಿಯ ಭೂಮಿ ವಿಭಾಗದ ಸಿಬ್ಬಂದಿ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲವೆಂದು ದೂರುಗಳು ಬರುತ್ತಿದ್ದು, ಎಲ್ಲ ಸೌಕರ್ಯ ಒದಗಿಸಿದರೂ ಕೆಲಸ ನಿರ್ವಹಿಸಲು ನಿಮಗೇನು ತೊಂದರೆಯಾಗುತ್ತಿದೆ? ವಿನಾಕಾರಣ ನೆಟ್ ಸಮಸ್ಯೆ ಹೇಳಬೇಡಿ. ಜನತೆಗೆ ಸಹಕರಿಸಿ, ನನಗೆ ದೂರು ಬಂದರೆ ನಿಮ್ಮ ಮೇಲೆ ಕ್ರಮ ಖಂಡಿತ ಎಂದು ಡಿಸಿ ಎಚ್ಚರಿಸಿದರು.
ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ, ತಹಸೀಲ್ದಾರ್ ಬಸವರಾಜ ನಾಗರಾಳ, ಗ್ರೇಡ್-2 ತಹಸೀಲ್ದಾರ್ ಸದಾಶಿವ ಮಕ್ಕೋಜಿ, ಸಿಪಿಐ ಉಳವಪ್ಪ ಸಾತೇನಹಳ್ಳಿ, ತಾಪಂ ಇಒ ಸುಭಾಸ ಸಂಪಗಾಂವಿ ಸೇರಿ ತಾಲೂಕುಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಬೈಲಹೊಂಗಲ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸುಮಾರು 153 ಜನ ದಲ್ಲಾಳಿಗಳಿದ್ದಾರೆ. ಶೇಖರ ಉಕಲಿ ಎಂಬಾತ ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸಿ ಜನರಿಂದ ಬೇಕಾಬಿಟ್ಟಿ ಹಣ ಸುಲಿಗೆ ಮಾಡಿ ಸಂಜೆಯಾಗುತ್ತಲೇ ಅಧಿಕಾರಿಗಳಿಗೆ ಹಂಚಿಕೆ ಮಾಡುತ್ತಾನೆ ಎಂದು ಕೆಆರ್‌ಎಸ್ ಸಂಘಟನೆ ಮುಖಂಡರು ಡಿಸಿಗೆ ದೂರಿದರು. ಇಲಾಖೆಗೆ ಭೇಟಿ ನೀಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ಡಿಸಿ ಭರವಸೆ ನೀಡಿದರು.
ಕೆರೆ ಒತ್ತುವರಿ ಕುರಿತು ಕನ್ನಡಪರ ಸಂಘಟನೆಗಳ ಶಿವಾನಂದ ಇಂಚಲ, ಶಿವಾನಂದ ಕೋಲಕಾರ, ನಾಗಪ್ಪ ಸಂಗೊಳ್ಳಿ, ವೆಂಕಟೇಶ ದಾಸೋಗ, ರಾಜು ಬೋಳನ್ನವರ, ಬಿ.ಎಂ.ಚಿಕ್ಕನಗೌಡರ ಇತರರು ದೂರು ನೀಡಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ನಿತೀಶ ಪಾಟೀಲ ಅವರು ದೊಡ್ಡ ಕೆರೆಗೆ ಭೇಟಿ ನೀಡಿ
ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ಯಾರೇ ಕೆರೆ ಒತ್ತುವರಿ ಮಾಡಿದ್ದರೂ ಸರ್ವೇ ಮಾಡಿಸಿ ಕ್ರಮ ಜರುಗಿಸುವ ಭರವಸೆ ನೀಡಿದರು.