ಕೋಲಾರ: ದೇವರ ಬಳಿ ಪೂಜೆಗೆ ಹೋಗುವ ಮೊದಲು, ಕರ್ತವ್ಯದಲ್ಲಿ ದೇವರನ್ನು ಕಾಣಬೇಕು ಎಂಬ ತತ್ವಾದರ್ಶ ತಿಳಿಸಿಕೊಟ್ಟ ಶಂಕರ ಭಗವತ್ಪಾದರ ಸ್ಮರಣೆ ಬದುಕಿಗೆ ಮಾರ್ಗದರ್ಶನವಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸತಿ ಇಲಾಖೆ, ಶೃಂಗೇರಿ ಶಂಕರ ಮಠದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತಿಯಲ್ಲಿ ಆಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಧರ್ಮ ರಕ್ಷಣೆಗಾಗಿ ಜನಿಸಿದ ಶಂಕರರು ಚಿಕ್ಕ ವಯಸ್ಸಿನಲ್ಲೇ ಮಾಡಿದ ಸಾಧನೆ ಸ್ಮರಣೀಯ. ಸಮಾಜ ಸರಿದಾರಿಯಲ್ಲಿ ಸಾಗಲು ಮಾರ್ಗದರ್ಶನ ನೀಡಿರುವ ಅವರ ಸ್ಮರಣೆಗಾಗಿ ಸರ್ಕಾರ ಈ ದಿನವನ್ನು ತತ್ವಜ್ಞಾನಿಗಳ, ದಾರ್ಶನಿಕರ ದಿನವಾಗಿ ಆಚರಿಸುತ್ತಿದೆ ಎಂದು ತಿಳಿಸಿದರು.
ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಂಚಾಲಕಿ ಮಂಜುಳಾ ಭೀಮರಾವ್ ಮಾತನಾಡಿ, ಸ್ವಾರ್ಥವಿಲ್ಲದ ಕಡೆ ಸಂವೃದ್ಧಿ ಇರುತ್ತದೆ. ಶಾಲಾ ಪಠ್ಯದಲ್ಲಿ ಶಂಕರರ ತತ್ವ ಅಳವಡಿಸಿ ಜಾತಿಯತೆ ದೂರಮಾಡಬೇಕು. ಇದರಿಂದ ಸಮಸಮಾಜ ನಿಮಾರ್ಣ ಸಾಧ್ಯವಾಗುತ್ತದೆ. ಕೇವಲ 8ನೇ ವಯಸ್ಸಿಗೆ ನಾಲ್ಕು ವೇದಗಳ ಅಧ್ಯಯನ ಪೂರೈಸಿ, 12ನೇ ವರ್ಷಕ್ಕೆ ನಾಲ್ಕು ವೇದಗಳ ಭಾಷ್ಯಾ ಬರೆದರು. ವೇದಗಳನ್ನು ಸರಳ ಭಾಷೆಯಲ್ಲಿ ಜನತೆಗೆ ತಲುಪಿಸಲು ಮುಂದಾದರು ಎಂದು ತಿಳಿಸಿದರು.
ದೇಶ ಪರ್ಯಟನೆ ಮಾಡಿ ಅಖಂಡ ಭಾರತ ಕಲ್ಪನೆಯನ್ನು ಸಾಕಾರಗೊಳಿಸಿದ ಕೀರ್ತಿ ಶಂಕರರದ್ದು. ಹಿಂದು ಧರ್ಮದ ಉನ್ನತಿಗಾಗಿ ಶೃಂಗೇರಿ, ಕೇದಾರ, ಜಗನ್ನಾಥಪುರಿ, ದ್ವಾರಕೆಯಲ್ಲಿ ಮಠಗಳನ್ನು ಸ್ವಾಪಿಸಿ ಆತ್ಮಜ್ಞಾನದ ಮಾರ್ಗ ತೋರಿಸಿದ್ದಾರೆ ಎಂದು ತಿಳಿಸಿದರು.
ಹಿರಿಯ ವಕೀಲ ಸಾ.ನಾ.ಮೂರ್ತಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ನರೇಂದ್ರಬಾಬು, ಜಿಲ್ಲಾ ಗ್ರಂಥಾಲಯದ ನೇತ್ರಾವತಿ, ಶಂಕರ ಸೇವಾ ಸಮಿತಿ ಅಧ್ಯಕ್ಷ ಕಾರ್ತಿಕ್ ಕೃಷ್ಣಮೂರ್ತಿ, ಶ್ರೀಮಠದ ಧಮಾರ್ಧಿಕಾರಿ ಜೆ.ಎನ್.ರಾಮಕೃಷ್ಣ, ಖಜಾಂಚಿ ಮುರಳಿ ಸುಂದರ್, ಮುಖಂಡರಾದ ಪಿ.ಚಂದ್ರಪ್ರಕಾಶ್, ಹಾಬಿ ರಮೇಶ್, ರಾಮಕೃಷ್ಣಭಟ್, ಸುರೇಶ್, ಅಪ್ಪಣ್ಣಸ್ವಾಮಿ, ಇಸಿಒ ರಾಘವೇಂದ್ರ, ಕೆಯುಡಿಎ ಸದಸ್ಯ ಸತ್ಯನಾರಾಯಣರಾವ್, ಶಂಕರ್, ನಂಜುಂಡಯ್ಯಶ್ರೇಷ್ಠಿ ಮತ್ತಿತರರು ಪಾಲ್ಗೊಂಡಿದ್ದರು.