ಹಾಸನ: ಲೋಕಸಭಾ ಚುನಾವಣೆ ಕಾರ್ಯದಲ್ಲಿ ನಿಯೋಜಿತರಾದ ಅಧಿಕಾರಿ, ಸಿಬ್ಬಂದಿ ತಮ್ಮ ಕರ್ತವ್ಯದಲ್ಲಿ ಯಾವುದೇ ನಿರ್ಲಕ್ಷ್ಯ ಮತ್ತು ಲೋಪ ಎಸಗಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಲೋಕಸಭಾ ಚುನಾವಣೆ ಸಿದ್ಧತೆಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ದಿನದ 24 ಗಂಟೆಗಳ ಕಾಲವೂ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ತೀವ್ರಗೊಳಿಸಬೇಕು ಹಾಗೂ ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ನಿರಂತರವಾಗಿ ನಿಗಾ ಇಡಬೇಕು. ಸಾರ್ವಜನಿಕವಾಗಿ ತಿಳಿಯದಂತೆ ತಪಾಸಣಾ ತಂಡಗಳು ಸಂಚರಿಸಬೇಕು. ಅಕ್ರಮ ವ್ಯವಹಾರಗಳ ನಿಯಂತ್ರಣದಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸರಕು ಸಾಗಣೆಕೆಗಳ ಮೇಲೆ ಜಿಎಸ್‌ಟಿ ಅಧಿಕಾರಿಗಳು ನಿಗಾ ಇಡಬೇಕು. ಮದ್ಯ ಮಾರಾಟವನ್ನು ನಿರಂತರವಾಗಿ ಪರಿಶೀಲಿಸಬೇಕು. ಬ್ಯಾಂಕ್ ವ್ಯವಹಾರ, ಡಿಜಿಟಲ್ ವ್ಯವಹಾರಗಳನ್ನು ಗಮನಿಸಬೇಕು. ಒಂದೇ ಖಾತೆಯಿಂದ ಹಲವರಿಗೆ ನಿರಂತರವಾಗಿ ಹಣ ವರ್ಗಾವಣೆಯಾಗುತ್ತಿದ್ದರೆ ತಕ್ಷಣವೇ ವರದಿ ನೀಡಲು ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮತದಾರರಿಗೆ ಬೆದರಿಸುವ ಅಥವಾ ಹಣದ ಆಮಿಷ ಒಡ್ಡುವ ಸಾಧ್ಯತೆ ಇರುವ ಪ್ರದೇಶಗಳ ಮೇಲೆ ನಿಗಾ ಇಡಬೇಕು. ತಪಾಸಣಾ ತಂಡಗಳು ಇಂತಹ ಪ್ರದೇಶಗಳಲ್ಲಿ ನಿರಂತರವಾಗಿ ಭೇಟಿ ನೀಡಬೇಕು. ಯಾವುದೇ ಅಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಮಾತನಾಡಿ, ಚೆಕ್‌ಪೋಸ್ಟ್‌ಗಳ ಕಾರ್ಯಾಚರಣೆಯನ್ನು ವೆಬ್‌ಕಾಸ್ಟ್‌ಗಳ ಮೂಲಕ ಚುನಾವಣಾ ಆಯೋಗ ಗಮನಿಸುತ್ತಿದೆ. ಸಂಶಯಾಸ್ಪದ ಸರಕು ಮತ್ತು ಅಕ್ರಮ ಸಾಗಾಣಿಕೆಗಳನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ವಿವಿಧ ನೋಡಲ್ ಅಧಿಕಾರಿಗಳು, ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.