ಜಿಲ್ಲೆ

ಕರ್ತವ್ಯ ಲೋಪದಡಿ ಇಬ್ಬರು ಪಿಡಿಒ ಅಮಾನತು

ಎ.ಎಸ್.ಮಣಿಕಂಠ

ಚಾಮರಾಜನಗರ: ಕರ್ತವ್ಯ ಲೋಪದಡಿಯಲ್ಲಿ ಇಬ್ಬರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅವರನ್ನು ಅಮಾನತ್ತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.

ತಾಲೂಕಿನ ವೆಂಕಟಯ್ಯನಛತ್ರದ ಗ್ರಾಮ ಪಂಚಾಯಿತಿ ಪಿಡಿಓ ಆರ್.ಮಹೇಶ್ ಮತ್ತು ವೆಂಕಟಯ್ಯನಛತ್ರದ ಗ್ರಾಮ ಪಂಚಾಯಿತಿಯ ಹಿಂದಿನ ಪ್ರಭಾರ ಪಿಡಿಓ ಹಾಗೂ ಪ್ರಸ್ತುತ ಕೊತ್ತಲವಾಡಿ ಗ್ರಾಮ ಪಂಚಾಯಿತಿಯ ಗ್ರೇಡ್-1 ಕಾರ್ಯದರ್ಶಿ ಎಲ್.ರಾಜೇಂದ್ರ ಪ್ರಸಾದ್ ಎಂಬುವರನ್ನು ಅಮಾನತುಗೊಳಿಸಲಾಗಿದೆ. ಆರ್. ಮಹೇಶ್ ಅವರು ಏ.1 2022 ರಿಂದ ಮೇ.25 2023 ರವರೆಗೆ ಹಾಗೂ ಮಾ.5 2024 ರಿಂದ ಮಾ.31 2024 ರವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನಾ ಕೈಗೊಂಡ ಸಂದರ್ಭದಲ್ಲಿ ಗಮನಿಸಿರುವ ಲೋಪಗಳ ಹಿನ್ನೆಲೆಯಲ್ಲಿ ಇವರನ್ನು ಅಮಾನತುಗೊಳಿಸಲಾಗಿದೆ.

ರಾಜೇಂದ್ರ ಪ್ರಸಾದ್ ಅವರು ವೆಂಕಟಯ್ಯನಛತ್ರದ ಗ್ರಾ.ಪಂ ಯಲ್ಲಿ ಮೇ.26 2023 ರಿಂದ ಮಾ.4 2024 ರವರೆಗೆ ಪ್ರಭಾರ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನಾ ಕೈಗೊಂಡ ಸಂದರ್ಭದಲ್ಲಿ ಗಮನಿಸಿರುವ ಲೋಪಗಳ ಹಿನ್ನೆಲೆಯಲ್ಲಿ ಇವರನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.