ಜಿಲ್ಲೆ

ಕರ್ತವ್ಯ ಲೋಪ‌, ಮೂವರು ಅಧಿಕಾರಿಗಳು ಅಮಾನತು

ಬಳ್ಳಾರಿ : ಇಲ್ಲಿನ ವಿಮ್ಸ್ ನಲ್ಲಿ ಚಿಕಿತ್ಸೆಗಾಗಿ ರೋಗಿಗಳಿಂದ ಸಂಗ್ರಹಿಸುವ ಬಳಕೆದಾರರ ಶುಲ್ಕ 6.21 ಲಕ್ಷ ರೂ. ಬ್ಯಾಂಕ್ ಗೆ ಪಾವತಿಸುವ ವೇಳೆ ವಂಚಿಸಿದ ಆರೋಪದಡಿ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ವಿಮ್ಸ್ ನ ಎರಡನೇ ದರ್ಜೆ ಸಹಾಯಕ ದಯ ಅಮರ್, ಸಹಾಯಕಿ ಶರಣಮ್ಮ , ಕಚೇರಿ ಅಧೀಕ್ಷಕ ಗುರುರಾಜ್ ಅಮಾನತುಗೊಂಡವರು. ಆಸ್ಪತ್ರೆಯ ವಿವಿಧ ಕೌಂಟರ್ ಗಳಲ್ಲಿ ನಿತ್ಯ ಸಂಗ್ರಹವಾಗುವ ಹಣವನ್ನು ಮರು ದಿನ ಬ್ಯಾಂಕ್‌ಗೆ ಪಾವತಿಸಬೇಕು. ಆದರೆ, ಅನುಕಂಪ ಅಧಾರಿತದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ‌ ದಯ ಅಮರ್ ಬ್ಯಾಂಕ್ ಗೆ ಹಣ ಪಾವತಿಸುವ ವೇಳೆ ಚಲಾನ್ ತಿದ್ದುಪಡಿ ‌ಮಾಡಿ ಮೂರು ಬಾರಿ ಹಣ ವಂಚಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದರ ಸಂಪೂರ್ಣವಾಗಿ ತನಿಖೆ ನಡೆಸಿ ವರದಿ ನೀಡಲು ತಂಡ ರಚಿಸಲಾಗಿದೆ. ಇದನ್ನು ನಿತ್ಯ ಪರಿಶೀಲಿಸುವ ಜವಾಬ್ದಾರಿ ಹೊಂದಿದ್ದ ಕಚೇರಿಯ ಸಿಬ್ಬಂದಿ ಶರಣಮ್ಮ, ಕಚೇರಿಯ ಅಧೀಕ್ಷಕ ಗುರುರಾಜ್ ಅವರನ್ನು ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಅಮಾನತು ಮಾಡಲಾಗಿದೆ ಎಂದು ವಿಮ್ಸ್ ನಿರ್ದೇಶಕ ಡಾ.ಟಿ. ಗಂಗಾಧರಗೌಡ ತಿಳಿಸಿದ್ದಾರೆ.