ಚಿತ್ರದುರ್ಗ: ಪೊಲೀಸರು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿದ್ದರೆ ಜನರ ನಿರೀಕ್ಷೆಗೆ ತಕ್ಕಂತೆ ಕರ್ತವ್ಯ ನಿರ್ವಹಿಸಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ ವಾಸುದೇವ ಹೇಳಿದರು.
ಡಿಎಆರ್ ಮೈದಾನದಲ್ಲಿ ಮೂರು ದಿನಗಳ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಜನಸಂಖ್ಯೆ ಹೆಚ್ಚಳದಿಂದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಸಹಜವಾಗಿ ಒತ್ತಡದಲ್ಲಿ ಕಾರ್ಯ ನಿರ್ವಹಿಸುವಂತಾಗಿವೆ. ಈ ಒತ್ತಡ ನಿಯಂತ್ರಿಸಿ ನಾಗರಿಕರ ಆಶೋತ್ತರಗಳಿಗೆ ಸ್ಪಂದಿಸಲು ಉತ್ತಮ ಆರೋಗ್ಯ, ಮಾನಸಿಕ ಕ್ಷಮತೆ ಮುಖ್ಯ. ದೈಹಿಕ ಸದೃಢತೆ, ಮನೋಲ್ಲಾಸ, ಚೈತನ್ಯ ಪಡೆಯಲು ಇಂಥ ಕ್ರೀಡಾ ಕೂಟಗಳು ನೆರವಾಗುತ್ತವೆ ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ರಾಜ್ಯಪೊಲೀಸರು ಶಿಸ್ತಿಗೆ ಹೆಸರಾಗಿದ್ದಾರೆ. ಇವತ್ತಿನ ಸನ್ನಿವೇಶ,ಆಹಾರದಿಂದ ಪ್ರತಿಯೊಬ್ಬರು ಒತ್ತಡದ ಜೀವನ ನಡೆಸುವಂತಾಗಿದೆ. ದೈಹಿಕ ಕಸರತ್ತು ನಡೆಸಿದರೆ ಏಕಾಗ್ರತೆ ಸಾಧಿಸಬಹುದು ಎಂದು ತಿಳಿಸಿದರು.
ಜಿಲ್ಲೆಯ ಪೊಲೀಸರು ವಲಯ ಮತ್ತು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಲಿ ಎಂದರು. ಎಎಸ್‌ಪಿ ಎಸ್.ಜೆ.ಸೋಮಶೇಖರ್ ಸ್ವಾಗತಿಸಿ,ಡಿಎಆರ್ ಡಿವೈಎಸ್‌ಪಿ ಗಣೇಶ್ ವಂದಿಸಿದರು.
---
ಎಲ್ಲ ಠಾಣೆಗಳಲ್ಲೂ ಕೋರ್ಟ್
ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗಳಲ್ಲಿ ಷಟಲ್ ಬ್ಯಾಂಡ್ಮಿಂಟನ್ ಅಥವಾ ವಾಲಿಬಾಲ್ ಕೋರ್ಟ್ ನಿರ್ಮಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅಧಿಕಾರಿ,ಸಿಬ್ಬಂದಿಗೆ ಸೂಚಿಸಿದರು.
ಈ ನಿಟ್ಟಿನಲ್ಲಿ ತಾವು ಖುದ್ದು ನಿಗಾ ವಹಿಸುವುದಾಗಿ ಹೇಳಿದರು.ಕ್ರೀಡಾಕೂಟ ಪೊಲೀಸರಿಗೆ ಹಬ್ಬ ಇದ್ದಂತೆ. ಸಂತೋಷದಿಂದ ಎಲ್ಲರೂ ಪಾಲ್ಗೊಳ್ಳಬೇಕು ಂದು ಕಿವಿಮಾತು ಹೇಳಿದರು.
ತರಬೇತಿ ಅವಧಿಯಲ್ಲಿ ಆಟೋಟಗಳಲ್ಲಿ ಸಕ್ರಿಯವಾಗಿದ್ದವರು ಕಾರ್ಯಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಮ ರೆಯುವುದು ಸರಿಯಲ್ಲ. ನಿತ್ಯ ಕರ್ತವ್ಯ ನಿರ್ವಹಣೆ ನಡುವೆ ಸಮಯಾವಕಾಶ ಮಾಡಿಕೊಂಡು ವ್ಯಾಯಾಮ, ಆಟೋಟಗಳಂಥ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.
-----