ಜಿಲ್ಲೆ

‘ಕರ್ಣಪರ್ವ’ ದೊಡ್ಡಾಟ ಪ್ರದರ್ಶನ ನಾಳೆ

ಹುಬ್ಬಳ್ಳಿ : ಡಾ. ಚಂದ್ರಶೇಖರ ಕಂಬಾರ ಅವರ ದತ್ತಿ ಕಾರ್ಯಕ್ರಮದ ಅಂಗವಾಗಿ ಜನಪದ ಕಲಾ ಬಳಗ ಟ್ರಸ್ಟ್ ಆಶ್ರಯದಲ್ಲಿ ಸೆ. 11ರಂದು ಸಂಜೆ 6 ಗಂಟೆಗೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಉತ್ತರ ಕರ್ನಾಟಕದ ಪ್ರಸಿದ್ಧ ಕಲೆ ‘ಕರ್ಣಪರ್ವ’ ಎಂಬ ದೊಡ್ಡಾಟ ಪ್ರದರ್ಶನ ಆಯೋಜಿಸಲಾಗಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಟ್ರಸ್ಟ್ ಉಪಾಧ್ಯಕ್ಷ ಎಚ್.ಎಸ್. ಕಿರಣ, ಮಹಾಭಾರತದಲ್ಲಿ ಒಟ್ಟು 18 ಪರ್ವಗಳಿವೆ. ಅದರಲ್ಲಿ ಕರ್ಣಪರ್ವ ಎಂಬ 15ನೇ ಪರ್ವದ ದೊಡ್ಡಾಟ ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ಗೊಟಗೊಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಉದ್ಘಾಟಿಸಲಿದ್ದು, ಕರ್ಜಗಿ ಮತ್ತು ಹತ್ತಿಮತ್ತೂರು ವಿರಕ್ತಮಠದ ಶ್ರೀ ನಿಜಗುಣ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಟ್ರಸ್ಟ್ ಅಧ್ಯಕ್ಷ ವೀರಭದ್ರಯ್ಯ ಹಿರೇಮಠ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಜಾನಪದ ವಿವಿಯ ಗೋವಿಂದಪ್ಪ ತಳವಾರ ಕತೆ ರಚಿಸಿದ್ದು, ರಮೇಶ ಕರಬಸಮ್ಮನವರ ನಿರ್ದೇಶಿಸಿದ್ದಾರೆ. ದೊಡ್ಡಾಟದ ಹಿರಿಯ ಭಾಗವತ ಕಲಾವಿದ ಅಡವೆಯ್ಯಸ್ವಾಮಿ ಹಿರೇಮಠ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.