ದಾವಣಗೆರೆ:ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ 55ನೇ ಜನ್ಮದಿನದ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೆ.18ರಂದು ಮುಖಂಡರು ಹಾಗೂ ಕರೋನಾ ಸಂದರ್ಭದಲ್ಲಿ ದುಡಿದ ವಿವಿಧ ರಂಗದ 100 ಸೇವಾಕರ್ತರನ್ನು ಸನ್ಮಾನಿಸಲಾಗುವುದು ಎಂದು ಕಾಂಗ್ರೆಸ್‌ನ ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ ಹೇಳಿದರು.
4 ಕೋಟಿ ರೂ. ಮೌಲ್ಯದ ಕೋವಿಡ್ ಲಸಿಕೆಗಳನ್ನು ದಾವಣಗೆರೆ ನಾಗರಿಕರಿಗೆ ಉಚಿತವಾಗಿ ನೀಡಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೋವಿಡ್ ವೇಳೆ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸಿದ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಆಂಬುಲೆನ್ಸ್ ಚಾಲಕರು, ರುದ್ರಭೂಮಿ ಸಿಬ್ಬಂದಿಯನ್ನು ಗೌರವಿಸಲಾಗುವುದು. ಜಿಲ್ಲಾ ಕಾಂಗ್ರೆಸ್, ಯುವ ಘಟಕ, ಎಸ್‌ಟಿ, ಮಹಿಳಾ ಘಟಕ ಸೇರಿ ಎಲ್ಲ 14 ಬಗೆಯ ವಿಭಾಗಗಳು ಒಗ್ಗೂಡಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಶಾಸಕ ಎಸ್ಸೆಸ್ 2000ನೇ ಇಸವಿಯಲ್ಲಿ ಬಾಷಾನಗರ, ಗಾಂಧಿನಗರ ಇತರೆಡೆಗಳಲ್ಲಿ 10 ಸಾವಿರ ಮನೆಗಳನ್ನು ಬಡವರಿಗೆ ನಿರ್ಮಿಸಿದರು. ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕೂಡ 2005ರಲ್ಲಿ 15 ಸಾವಿರ ಮನೆಗಳನ್ನು ನಿರ್ಮಿಸಿಕೊಟ್ಟರು. ಆದರೆ ಇದುವರೆಗೆ ಆಡಳಿತ ನಡೆಸುತ್ತಿರುವ ಬಿಜೆಪಿ ಬಡವರಿಗೆ ಒಂದೂ ಮನೆ ಕಟ್ಟಿಸಿಕೊಡಲಿಲ್ಲ ಎಂದು ದೂರಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಡವರಿಗೆ ನೀಡಿದ ಅನ್ನಭಾಗ್ಯದ 7 ಕೆಜಿ ಅಕ್ಕಿಯಲ್ಲಿ 4 ಕೆಜಿ ಕಡಿತ ಮಾಡಲಾಗಿದೆ. ಬಡವರ ಹಸಿವು ನೀಗಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳು ಬಿಜೆಪಿ ಅವಧಿಯಲ್ಲಿ ಮುಚ್ಚಿವೆ. ಇದನ್ನು ಖಂಡಿಸಿ ಸೆ.27ರಂದು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಜಿ.ಶಿವಕುಮಾರ್, ಪಕ್ಷದ ವೀಕ್ಷಕ ಚಿದಾನಂದಮೂರ್ತಿ, ಸಂಜೀವ್, ಅಯೂಬ್ ಪೈಲ್ವಾನ್, ಡೋಲಿ ಚಂದ್ರು, ಅನಿತಾಬಾಯಿ ಮಾಲತೇಶ್ ಇತರರಿದ್ದರು.