ಜಿಲ್ಲೆ

ಕರೊನಾದಿಂದಾಗಿ ಸ್ಥಗಿತಗೊಂಡಿದ್ದ ಭದ್ರಾವತಿ ಜಾನುವಾರು ಸಂತೆಗೆ ಮತ್ತೆ ಜೀವಕಳೆ

ಭದ್ರಾವತಿ: ಕರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಭದ್ರಾವತಿಯ ಜಾನುವಾರು ಸಂತೆಗೆ ಶಾಸಕ ಬಿ.ಕೆ.ಸಂಗಮೇಶ್ವರ್ ಭಾನುವಾರ ಮರುಚಾಲನೆ ನೀಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತನ್ನ ಆವರಣದಲ್ಲಿ ಪ್ರತಿ ಭಾನುವಾರ ಜಾನುವಾರುಗಳ ಸಂತೆ ನಡೆಸಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಕರೊನಾ ಕಾರಣ ತಾಲೂಕು ಆಡಳಿತ ಹಾಗೂ ಎಪಿಎಂಸಿ ಅಧಿಕಾರಿಗಳು ಸರ್ಕಾರದ ಮಾರ್ಗಸೂಚಿಯಂತೆ ಜಾನುವಾರು ಸಂತೆ ನಡೆಸಲು ಕಳೆದೆರಡು ವರ್ಷಗಳಿಂದ ಅವಕಾಶ ನೀಡಿರಲಿಲ್ಲ.

ಪ್ರಸ್ತುತ ಕರೊನಾ ತಹಬದಿಗೆ ಬಂದಿದ್ದು ಎಪಿಎಂಸಿ ಆವರಣದಲ್ಲಿ ಜಾನುವಾರು ಸಂತೆ ನಡೆಸಲು ಪುನರ್ ಅನುಮತಿ ನೀಡಬೇಕೆಂದು ಜಾನುವಾರು ಸಾಕಾಣಿಕೆದಾರರು, ರೈತರು, ವ್ಯಾಪಾರಸ್ಥರು ಮನವಿ ಸಲ್ಲಿಸಿದ್ದರು. ಅವರ ಮನವಿಗೆ ಸ್ಪಂದಿಸಿದ ಎಪಿಎಂಸಿ ಅಧಿಕಾರಿಗಳು ಆ.28ರಿಂದ ಸಂತೆ ನಡೆಸಲು ಅನುಮತಿ ನೀಡಿದ್ದಾರೆ.

ಜಾನುವಾರುಗಳ ಸಂತೆಗೆ ಆಗಮಿಸಿದ ದನ, ಕರು, ಎತ್ತು, ಎಮ್ಮೆಗಳಿಗೆ ಹೂವಿನ ಹಾರ ಹಾಕಿ, ಜಾನುವಾರುಗಳ ಮಾಲೀಕರಿಗೆ ಶಾಲು ಹೊದಿಸಿ ಸನ್ಮಾನಿಸಿ ಸಂತೆಗೆ ಚಾಲನೆ ನೀಡಿದ ಬಿ.ಕೆ.ಸಂಗಮೇಶ್ವರ್, ರಾಜ್ಯದಲ್ಲಿಯೆ ಹೆಸರುವಾಸಿಯಾದ ಚನ್ನರಾಯಪಟ್ಟಣ ತಾಲೂಕಿನ ಗಂಡಸಿ ಹ್ಯಾಂಡ್‌ಪೋಸ್ಟ್ ಮಾದರಿಯಲ್ಲಿ ನಗರದಲ್ಲಿಯೂ ಜಾನುವಾರುಗಳ ಸಂತೆ ನಡೆಯಬೇಕು. ಅದಕ್ಕೆ ಪೂರಕವಾದ ಕುಡಿಯುವ ನೀರಿನ ತೊಟ್ಟಿ, ಮೇವಿನ ಸಂಗ್ರಹಣೆಯ ವ್ಯವಸ್ಥೆ ಸೇರಿದಂತೆ ಸಕಲ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ಮಾಡಿಕೊಡಲಾಗುವುದು. ಜಾನುವಾರುಗಳ ಸಂತೆ ಕೇವಲ ಭಾನುವಾರಕಷ್ಟೆ ಸೀಮಿತಗೊಳಿಸದೆ ಶನಿವಾರವೂ ನಡೆಸಲು ಅವಕಾಶ ನೀಡಲಾಗುವುದು ಎಂದರು.