ದೊಡ್ಡಬಳ್ಳಾಪುರ: ಕರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವಾಗುತ್ತಿದ್ದಾರೆ. ಶಿಕ್ಷಣವಿದ್ದರೆ ಎಲ್ಲವೂ ಇದ್ದಂತೆ. ಎಲ್ಲವೂ ಸರಿಯಾದ ಬಳಿಕ ಪಾಲಕರು ಮಕ್ಕಳನ್ನು ಶಾಲೆಗೆ ಕಡ್ಡಾಯವಾಗಿ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಹೇಳಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬುಧವಾರ ಟ್ಯಾಬ್ ವಿತರಣೆ ಮಾಡಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿ ಅಷ್ಟೇ ಅಲ್ಲದೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೂ ಟ್ಯಾಬ್ ವಿತರಣೆ ಮಾಡುವ ಗುರಿ ಇದೆ ಎಂದರು.
ಹಿಂದೆ ವಿದ್ಯಾರ್ಥಿಗಳು ಪುಸ್ತಕ, ಪೆನ್, ಹಾಸ್ಟೆಲ್‌ಗಳಲ್ಲಿ ಊಟಕ್ಕಾಗಿ ಪರದಾಟ, ಹರಿದ ಬಟ್ಟೆಗಳಲ್ಲೇ ಶಾಲೆಗೆ ಹೋಗುವ ಅನಿವಾರ್ಯತೆ ಇತ್ತು. ಆದರೆ ಇಂದು ಸರ್ಕಾರವೇ ಪುಸ್ತಕ, ಪೆನ್, ಬಟ್ಟೆ ಮತ್ತಿತರ ಮೂಲಸೌಕರ್ಯ ಒದಗಿಸುತ್ತಿದೆ. ಸರ್ಕಾರಿ ಶಾಲಾ-ಕಾಲೇಜುಗಳು ಹಾಸ್ಟೆಲ್‌ಗಳು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತಿವೆ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳು ಉತ್ತಮ ಸಾಧನೆ ಮಾಡಬೇಕಿದೆ ಎಂದು ಹೇಳಿದರು.
ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಅವಶ್ಯಕತೆಗೆ ಅನುಗುಣವಾಗಿ ಮಾತ್ರ ಬಳಸಬೇಕು. ಮಿತಿಮೀರಿ ಬಳಸಿದರೆ ದೃಷ್ಟಿದೋಷದ ಸಮಸ್ಯೆಯ ಜತೆಗೆ ಅಡ್ಡದಾರಿ ಹಿಡಿಯುವ ಅಪಾಯ ಹೆಚ್ಚಾಗಿರುತ್ತದೆ. ಈಗಾಗಲೆ ಶೇ.20 ವಿದ್ಯಾರ್ಥಿಗಳು ದೃಷ್ಟಿದೋಷ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸಯ್ಯ ಮಾತನಾಡಿ, ಸರ್ಕಾರಿ ಶಾಲಾ-ಕಾಲೇಜಿನತ್ತ ಹೆಚ್ಚಿನ ವಿದ್ಯಾರ್ಥಿಗಳು ಮುಖ ಮಾಡುತ್ತಿದ್ದಾರೆ. ಈ ವರ್ಷ ಕಳೆದೆರಡು ವರ್ಷಗಳಿಗಿಂತ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಇದೇ ವೇಳೆ ಸ್ಮಾರ್ಟ್ ಕೊಠಡಿಗಳನ್ನು ಉದ್ಘಾಟಿಸಲಾಯಿತು. ಶಾಸಕ ವೆಂಕಟರಮಣಯ್ಯ, ಪ್ರಾಂಶುಪಾಲ ಶ್ರೀನಿವಾಸಯ್ಯ, ಮಹಿಳಾ ಕಾಲೇಜು ಪ್ರಾಂಶುಪಾಲೆ ಶ್ಯಾಮಲಾ, ಉಪನ್ಯಾಸಕರಾದ ಸದಾಶಿವ ರಾಮಚಂದ್ರಗೌಡ, ದಿನಕರ್, ನರಸಿಂಹಮೂರ್ತಿ ಮತ್ತಿತರರಿದ್ದರು.