ಜಿಲ್ಲೆ

ಕರೊನಾದಿಂದ ಆರ್ಥಿಕತೆ ಮೇಲೆ ಪರಿಣಾಮ

Belagavi

ಬೆಳಗಾವಿ: ಕರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕ, ಸಾಮಾಜಿಕ ವ್ಯವಸ್ಥೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದು, ಮುಂಬರುವ ದಿನಗಳಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಹೇಳಿದ್ದಾರೆ.

ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂ. ದೀನದಯಾಳ ಉಪಾಧ್ಯಾಯ ಪೀಠದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಲಸೆ ಬಂದ ಬಡ ಮತ್ತು ನಿರ್ಗತಿಕ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ವಿತರಿಸಿ ಮಾತನಾಡಿ, ಕರೊನಾದಿಂದಾಗಿ ಮನುಕುಲದ ಜೀವನ ಕ್ರಮ ತತ್ತರಿಸಿದೆ. ಅದರಲ್ಲೂ ಭಾರತದಂತಹ ರಾಷ್ಟ್ರದಲ್ಲಿ ಜನಜೀವನವು ನಿಜಕ್ಕೂ ಶೋಚನೀಯ ಸ್ಥಿತಿ ತಲುಪಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್ ಉತ್ತರ ಕರ್ನಾಟಕ ಕಾರ್ಯ ವಾಹಕ ರಾಘವೇಂದ್ರ ಕಾಗವಾಡ ಮಾತನಾಡಿ, ಕೋವಿಡ್-19ನಿಂದಾಗಿ ಅನೇಕ ಬಡಕುಟುಂಬ ಸಮಸ್ಯೆಗೆ ಸಿಲುಕಿವೆ. ನಗರ ಪ್ರದೇಶಗಳಲ್ಲಿ ಪೋಷಕರನ್ನು ಕಳೆದುಕೊಂಡು ಸಾವಿರಾರು ಮಕ್ಕಳು ಅನಾಥರಾಗಿದ್ದಾರೆ ಎಂದರು. ಕುಲಸಚಿವ ಪ್ರೊ. ಬಸವರಾಜ ಪದ್ಮಶಾಲಿ, ಕುಲಸಚಿವ (ಮೌಲ್ಯಮಾಪನ) ಪ್ರೊ.ಎಸ್.ಎಂ.ಹುರಕಡ್ಲಿ, ಪ್ರೊ.ಡಿ.ಎನ್.ಪಾಟೀಲ, ನೀತಾ ರಾವ್, ಡಾ.ಆನಂದ ಹೊಸೂರ, ಡಾ.ರವೀಂದ್ರ, ಪರಮೇಶ್ವರ ಹೆಗಡೆ, ಡಾ. ಪ್ರಕಾಶ ಕಟ್ಟಿಮನಿ, ಡಾ ಶಿವಲಿಂಗಯ್ಯ ಗೋಟೆ ಇದ್ದರು.