ವಿಜಯಪುರ: ಮಹಾಮಾರಿ ಕರೊನಾದಿಂದ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವುದಕ್ಕೆ ಆಸ್ಪತ್ರೆಗಳ ವಿಳಂಬ ನೀತಿ ಹಾಗೂ ಸರ್ಕಾರದ ದಿವ್ಯ ನಿರ್ಲಕ್ಷೃವೇ ಕಾರಣ ಎಂದು ಜೆಡಿಎಸ್ ಧುರೀಣೆ ಸುನಿತಾ ದೇವಾನಂದ ಚವಾಣ್ ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಚಿಕಿತ್ಸೆ ಸಿಗುತ್ತಿಲ್ಲ. ಕರೊನಾ ಸೋಂಕಿತರು ನರಳುತ್ತಿದ್ದರೂ ಆಸ್ಪತ್ರೆಗಳು ಮಾತ್ರ ಸಕಾಲಕ್ಕೆ ರೋಗಿಗೆ ಚಿಕಿತ್ಸೆ ನೀಡದ ಕಾರಣ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಬೆಡ್ ಸಮಸ್ಯೆ, ಆಕ್ಸಿಜನ್ ಸಮಸ್ಯೆ ಹಾಗೂ ರೆಮ್‌ಡಿಸಿವಿರ್ ಚುಚ್ಚುಮದ್ದು ಲಸಿಕೆ ಅಭಾವ ಜನರನ್ನು ಹಿಂಡಿ ಹಿಪ್ಪೆ ಮಾಡಿವೆ. ಇಷ್ಟಾದರೂ ಆಳುವ ವರ್ಗ ಗಂಭೀರವಾಗಿ ಪರಿಗಣಿಸದಿರುವುದು ನೋವಿನ ಸಂಗತಿ ಎಂದು ಅವರು ತಿಳಿಸಿದ್ದಾರೆ.
ಕರೊನಾ ಮೊದಲ ಅಲೆಯಲ್ಲಿ ತಕ್ಕಮಟ್ಟಿಗಾದರೂ ಸೌಲಭ್ಯ ಕಲ್ಪಿಸಲಾಗಿತ್ತು. ಎರಡನೇ ಅಲೆಯಲ್ಲಿ ಯಾವುದೇ ಚಿಕಿತ್ಸಾ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ಜನ ಒದ್ದಾಡಿ ಸಾಯುತ್ತಿದ್ದಾರೆ. ನನ್ನ ಕಣ್ಣಾರೆ ರೋಗಿಯೊಬ್ಬ ನರಳಿ ಸಾಯುವುದನ್ನು ಕಂಡಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕರೆ ಮಾಡಿ ಪರಿಸ್ಥಿತಿ ಗಮನಕ್ಕೆ ತಂದಿದ್ದೇನೆ. ನನ್ನ ಪುತ್ರನಿಗೂ ಕರೊನಾ ಬಂದಿದ್ದು ಚಿಕಿತ್ಸೆಗಾಗಿ ಸಾಕಷ್ಟು ಪರದಾಡಿದ್ದೇನೆ. ಇನ್ನು ಬಡವರ ಪಾಡಂತೂ ಹೇಳತೀರದಾಗಿದೆ ಎಂದು ಸುನಿತಾ ಚವಾಣ್ ಪರಿಸ್ಥಿತಿಯ ಗಂಭೀರತೆ ತೋರ್ಪಡಿಸಿದ್ದಾರೆ.
ಈಚೆಗೆ ಅಲ್ಲಾಪುರ ತಾಂಡೆಯ ಮೌನೇಶ್ವರ ನಗರದ 32 ವರ್ಷದ ಮಹಿಳೆಯೊಬ್ಬರು ಕರೊನದಿಂದ ತೀವ್ರ ಬಳಲಿದ್ದರು. ಸರ್ಕಾರಿ ಆಸ್ಪತ್ರೆಗೆ ಹೋದರೆ ಆಕೆಯನ್ನು ಒಳಗೆ ಬಿಟ್ಟಿಲ್ಲ. ಸೌಜನ್ಯಕ್ಕೆ ಏನಾಗಿದೆ ಎಂದೂ ವಿಚಾರಿಸಿಲ್ಲ. ಬಳಿಕ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ನಾನೇ ಸಲಹೆ ನೀಡಿದೆ. ಖಾಸಗಿ ಆಸ್ಪತ್ರೆಗೆ ಹೋದರೆ ಗಂಟಲು ದ್ರವ ಮಾದರಿಯ ಪರೀಕ್ಷೆ ಪತ್ರ ಕೇಳಿದ್ದಾರೆ. ಮಹಿಳೆ ಪತಿ ಪರೀಕ್ಷೆ ಪತ್ರ ಇಲ್ಲವೆಂದಾಗ ಚಿಕಿತ್ಸೆ ನೀಡದೆ ಸಾಗಹಾಕಿದ್ದಾರೆ. ಪರಿಸ್ಥಿತಿ ಹೀಗಾದರೆ ಬದುಕುವುದು ಹೇಗೆ? ಎಂದು ಸುನಿತಾ ಚವಾಣ್ ಪ್ರಶ್ನಿಸಿದ್ದಾರೆ.
ಇಂತಹ ಹಲವಾರು ಉದಾಹರಣೆಗಳು ದಿನನಿತ್ಯ ಕಣ್ಮುಂದೆ ನಡೆಯುತ್ತಿದ್ದರೂ ನಮ್ಮಿಂದ ಏನೂ ಮಾಡಲಾಗುತ್ತಿಲ್ಲವಲ್ಲ ಎಂಬ ನೋವಿದೆ. ಆದ್ದರಿಂದ ಸರ್ಕಾರ ಕೂಡಲೇ ಚಿಕಿತ್ಸಾ ಸೌಲಭ್ಯ ಸಿಗುವಂತೆ ನಿಗಾ ವಹಿಸಬೇಕು. ಸಣ್ಣ ಪುಟ್ಟ ಕಾಯಿಲೆ ಇದ್ದ ಜನ ಬಂದರೂ ಚಿಕಿತ್ಸೆ ಸೌಲಭ್ಯ ಸಿಗುವಂತಾಗಬೇಕು. ಇಲ್ಲವೆಂದಲ್ಲಿ ಜನರ ಸಾವು ಸಂಭವಿಸುತ್ತದೆ. ಹೀಗಾಗದಂತೆ ನೋಡಿಕೊಳ್ಳಬೇಕು. ಮಾನವೀಯ ನೆಲೆಗಟ್ಟಿನಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಸರ್ಕಾರಕ್ಕೆ ಮನವಿ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.