ಜಿಲ್ಲೆ

ಕರೊನಾಗೆ ನಗರಸಭೆ ಸದಸ್ಯ ಬಲಿ

ಬಸವಕಲ್ಯಾಣ: ಇಲ್ಲಿನ ನಗರಸಭೆ ಸದಸ್ಯ ಮಾರುತಿ ಡಿ. ಲಾಡೆ (54) ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ವಾರದ ಹಿಂದೆ ಇವರಿಗೆ ಕರೊನಾ ಪಾಸಿಟಿವ್ ಬಂದಿತ್ತು. ಬೀದರ್ ಬ್ರಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ನಗರದ ಧರಂಪ್ರಕಾಶ ಬಡಾವಣೆ ನಿವಾಸಿಯಾಗಿದ್ದ ಮಾರುತಿ ಅವರು ನಗರಸಭೆ ವಾಡ್೯ 11ರ ಬಿಜೆಪಿ ಸದಸ್ಯರಿದ್ದರು. ಲಾಡೆ ಅವರು ಜೀವಪರ, ಜನಪರ ಕಾಳಜಿಯುಳ್ಳ ಕ್ರಿಯಾಶೀಲ ಮುಖಂಡರಾಗಿದ್ದರು. ಮಾದಿಗ ದಂಡೋರ ಹೋರಾಟ ಸಮಿತಿ ತಾಲೂಕು ಅಧ್ಯಕ್ಷರಾಗಿದ್ದರು. ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿದ್ದರು. ಹಿಂದುಳಿದವರು, ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿ, ಅವರ ಕೆಲಸ ಮಾಡಿಸಿಕೊಡಲು ಅವಿರತ ಪ್ರಯತ್ನಿಸುತ್ತಿದ್ದರು. ಪತ್ನಿ, ಮೂವರು ಪುತ್ರಿಯರು, ಪುತ್ರ ಸೇರಿ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ. ಸೋಮವಾರ ಧರಂಪ್ರಕಾಶ ಓಣಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಿತು.

ಲಾಡೆ ನಿಧನ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ರೂ. 30 ಸಾವಿರ ನೆರವು ನೀಡಿದ್ದಾರೆ. ಬ್ರಿಮ್ಸ್ ಆಸ್ಪತ್ರೆಯಿಂದ ಪ್ರಾರ್ಥಿವ ಶರೀರ ಸಾಗಿಸಲು ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ವತಿಯಿಂದ ಉಚಿತ ಆಂಬುಲೆನ್ಸ್ ವ್ಯವಸ್ಥೆ ಮಾಡಿದರು.