ಜಿಲ್ಲೆ

ಕರೊನಾಕ್ಕೆ ಕಾಫಿನಾಡಿನ ಮೊದಲ ಮಗು ಬಲಿ

ಚಿಕ್ಕಮಗಳೂರು: ಕರೊನಾ ಮೂರನೇ ಅಲೆ ಮಕ್ಕಳಿಗೆ ಅಪಾಯಕಾರಿ ಎಂಬ ಎಚ್ಚರಿಕೆಯ ಬೆನ್ನಲ್ಲೇ ಕಾಫಿನಾಡಿನ ಎರಡು ವರ್ಷದ ಗಂಡು ಮಗು ಕರೊನಾ ಸೋಂಕಿಗೆ ಬಲಿಯಾಗಿದೆ. ಮೊದಲೇ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿನಲ್ಲಿ ಕರೊನಾ ಸೋಂಕು ಕೂಡ ಕಾಣಿಸಿಕೊಂಡಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ಕಳೆದ ಐದು ದಿನಗಳ ಹಿಂದೆ ಉಡುಪಿಯ ಕಸ್ತೂರಬಾ ಮೆಡಿಕಲ್ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇದೀಗ ಕೊನೆಯುಸಿರೆಳೆದಿದೆ.

ಸೋಂಕಿನಿಂದ 325 ಸಾವು:
ಜಿಲ್ಲೆಯಲ್ಲಿ ಸೋಮವಾರ ಸೋಂಕಿನಿಂದ ಮಗು ಸೇರಿ ಮೂವರು ಸಾವಿಗೀಡಾಗಿದ್ದು, ಇತರ ಇಬ್ಬರೆಂದರೆ ಚಿಕ್ಕಮಗಳೂರಿನ 61 ವರ್ಷದ ವೃದ್ಧೆ ಹಾಗೂ ತರೀಕೆರೆಯ 58 ವರ್ಷದ ಮಹಿಳೆ. ಜಿಲ್ಲೆಯಲ್ಲಿ ಮೊದಲ ಹಾಗೂ ಎರಡನೇ ಅಲೆಯಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ 325ಕ್ಕೆ ಏರಿಕೆಯಾಗಿದೆ. ಕಳೆದ ವರ್ಷದ ಅಲೆಯಲ್ಲಿ 139 ಮಂದಿ ಸಾವಿಗೀಡಾಗಿದ್ದು, ಈ ವರ್ಷದ ಸೋಂಕಿನ ತೀವ್ರತೆಯಲ್ಲಿ 186 ಮಂದಿ ಮೃತಪಟ್ಟಿದ್ದಾರೆ.

152 ಮಂದಿಯಲ್ಲಿ ಸೋಂಕು:
ಸೋಮವಾರ 152 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದರೆ, 336 ಮಂದಿ ಸಂಪೂರ್ಣ ಗುಣ ಹೊಂದಿ ಬಿಡುಗಡೆಗೊಂಡಿದ್ದಾರೆ. ಸೋಂಕಿತರಲ್ಲಿ ಹೋಂ ಐಸೊಲೇಶನ್ 141, ಡಿಸಿಎಚ್‍ಸಿ ಹಾಗೂ ಖಾಸಗಿ ಅಸ್ಪತ್ರೆಯಲ್ಲಿ ತಲಾ ನಾಲ್ವರು ಹಾಗೂ ಸಿಸಿಸಿಯಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 2360 ಸಕ್ರಿಯ ಪ್ರಕರಣಗಳಿವೆ.