ಜಿಲ್ಲೆ

ಕರೊನಾಕ್ಕೆ ಕರಗಿದ ರಂಗ ಸಂಭ್ರಮ

ಹುಬ್ಬಳ್ಳಿ: ಪ್ರತಿ ವರ್ಷ ವೈಭವದಿಂದ ನಡೆಯುತ್ತಿದ್ದ ಹುಬ್ಬಳ್ಳಿಯ ರಂಗಪಂಚಮಿಯು ಕರೊನಾ ಸೋಂಕು (ಕೋವಿದ್-19) ಭೀತಿಯಿಂದ ಈ ಬಾರಿ ಕರಗಿ ಹೋಗಿತ್ತು. ಜಗ್ಗಲಗಿ, ಹಲಗೆ ಸದ್ದಿನೊಟ್ಟಿಗೆ ಹೆಜ್ಜೆ ಹಾಕುತ್ತಿದ್ದ ಜನರ ಸಂಖ್ಯೆಯಲ್ಲಿ ಕುಸಿತ ಕಂಡಿತು.

ಶುಕ್ರವಾರ ಬೆಳಗ್ಗೆಯಿಂದಲೇ ನಗರದ ಕಮರಿಪೇಟೆ, ಮರಾಠಾ ಗಲ್ಲಿ, ದಾಜಿಬಾನ್ ಪೇಟ, ಮ್ಯಾದಾರ ಓಣಿ, ಮಹಾವೀರ ಗಲ್ಲಿ, ದುರ್ಗದಬೈಲ್, ಕಿತ್ತೂರ ಚನ್ನಮ್ಮ ವೃತ್ತ ಸೇರಿ ಇತೆರೆಡೆ ಜನರು ಸೇರಿದ್ದರಾದರೂ ಅಷ್ಟೊಂದು ಸಂಭ್ರಮ ಇರಲಿಲ್ಲ. ಆದರೂ ಯುವಕರು ಬಣ್ಣ ಮೆತ್ತಿಕೊಂಡು ನಗರದ ತುಂಬೆಲ್ಲ ಓಡಾಡಿದರು.

ಕೈಯಲ್ಲಿ ಬಣ್ಣ ಬಣ್ಣದ ಪ್ಯಾಕೆಟ್, ನೀರಿನ ಬಾಟಲ್ ಹಿಡಿದು ಪರಿಚಿತರಿಗೆ ಮೊದಲು ಬಣ್ಣ ಹಚ್ಚಿದರು. ಯುವತಿಯರು ಹಾಗೂ ಮಹಿಳೆಯರು ಮನೆಮನೆಗೆ ತೆರಳಿ ಬಣ್ಣ ಹಚ್ಚಿದರು. ಬೈಕ್​ಗಳ ಸೈಲೆನ್ಸರ್ ತೆಗೆದು ಕರ್ಕಶ ಶಬ್ದ ಮಾಡುತ್ತ ಯುವಕರು ಓಡಾಡಿದರು. ಕೆಲವರು ನೀರಲ್ಲಿ ಬಣ್ಣ ಹಾಕಿ ತಲೆ ಮೇಲೆ ಸುರಿದರೆ, ಕೆಲವರು ತಲೆಗೆ ಮೊಟ್ಟೆ ಹೊಡೆದು ಸಂಭ್ರಮಿಸಿದರು. ವಿವಿಧೆಡೆ ಪ್ರತಿಷ್ಠಾಪಿಸಿರುವ ಕಾಮಣ್ಣ ಹಾಗೂ ರತಿ ಮೂರ್ತಿ ಮುಂದೆ ಸಾಲಾಗಿ ನಿಂತಿದ್ದ ಯುವಕರು, ದಾರಿ ಹೋಕರಿಗೆ ಸ್ವಲ್ಪ ಬಣ್ಣ ಎರಚಿಯೇ ಮುಂದಕ್ಕೆ ಕಳುಹಿಸುತ್ತಿದ್ದರು. ನಂತರ ಮೂರ್ತಿಗಳ ಮೆರವಣಿಗೆ ನಡೆಸಿ ದಹಿಸಲಾಯಿತು. ಮಕ್ಕಳು ಕೈಯಲ್ಲಿ ಪಿಚಕಾರಿ ಹಿಡಿದು, ದೊಡ್ಡವರಿಗೂ ಹೆದರಿಸುತ್ತಿದ್ದರು. ಮರಾಠಾ ಗಲ್ಲಿ ಇತರೆಡೆ ಯುವಕ-ಯುವತಿಯರು ರೇನ್ ಡಾನ್ಸ್ ಮಾಡಿದರು. ಗಡಿಗೆ ಹೊಡೆದು ಯುವಕರು ಸಂಭ್ರಮಿಸಿದರು.

ಹೋಟೆಲ್, ಅಂಗಡಿ ಬಂದ್: ಪ್ರತಿ ವರ್ಷ ರಂಗಪಂಚಮಿ ಸಂಭ್ರಮದಿಂದ ನಡೆಯುತ್ತಿತ್ತು. ಕಳೆದ 5 ವರ್ಷದ ಹಿಂದೆ ಇದ್ದ ಆ ಕಲರವ ಈಗ ಕಡಿಮೆಯಾಗುತ್ತ ಬಂದಿದೆ. ಆದರೆ, ಈ ಬಾರಿ ಕರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಜನರು ಗುಂಪುಗೂಡುವುದು ಕಡಿಮೆಯಾಗಿತ್ತು. ಹೋಟೆಲ್, ಅಂಗಡಿಗಳು ಬಂದ್ ಆಗಿದ್ದವು. ನಗರ ಸಾರಿಗೆ ಹಾಗೂ ಬಿಆರ್​ಟಿಎಸ್ ಚಿಗರಿ ಬಸ್​ಗಳು ರಸ್ತೆಗೆ ಇಳಿಯಲಿಲ್ಲ. ಮಧ್ಯಾಹ್ನ ನಂತರ ಬಸ್​ಗಳು ಸಂಚರಿಸಲಾರಂಭಿಸಿದವು.

ಓಕá-ಳಿಯಾಡಿದ ಪೊಲೀಸರು: ರಂಗಪಂಚಮಿ ನಿಮಿತ್ತ ನಗರದ ವಿವಿಧೆಡೆ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಮೊದ ಮೊದಲು ಯಾರೂ ಪೊಲೀಸರೊಂದಿಗೆ ಓಕಳಿಯಾಟವಾಡಲಿಲ್ಲ. ಆದರೆ, ಪೊಲೀಸರೇ ಬಣ್ಣದಾಟದಲ್ಲಿ ತೊಡಗಿದ್ದರು. ಇದರಿಂದ ಅಲ್ಲಿಯೇ ಇದ್ದ ಯುವಕರು ಪೊಲೀಸರಿಗೆ ಬಣ್ಣ ಹಚ್ಚಿ ಖುಷಿಪಟ್ಟರು.

ವಿವಿಧೆಡೆ ಬೈಕ್ ಅಪಘಾತ: ಹುಬ್ಬಳ್ಳಿ: ರಂಗಪಂಚಮಿ ಆಚರಣೆ ವೇಳೆ ನಗರದ ವಿವಿಧೆಡೆ ಬೈಕ್ ಅಪಘಾತಗಳು ಸಂಭವಿಸಿದ್ದು, ಕಸಬಾಪೇಟ ವ್ಯಾಪ್ತಿಯಲ್ಲಿ ಸವಾರನೊಬ್ಬನ ತಲೆಗೆ ಪೆಟ್ಟು ಬಿದ್ದಿದೆ. ಹೋಳಿ ಆಚರಣೆ ವೇಳೆ ಬೈಕ್, ಕಾರಿನಲ್ಲಿ ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆ ವೇಳೆ ದೇಶಪಾಂಡೆ ನಗರ, ಕಸಬಾಪೇಟ, ವಿದ್ಯಾನಗರ ವ್ಯಾಪ್ತಿಯಲ್ಲಿ ಆಯತಪ್ಪಿ ಬೈಕ್ ಬಿದ್ದಿವೆ. ಘಟನೆಯಲ್ಲಿ ಕೆಲ ಸವಾರರು ಗಾಯಗೊಂಡಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸಂಚಾರ ವಿಭಾಗದ ಎಸಿಪಿ ಎಸ್.ಎಂ. ಸಂದಿಗವಾಡ ತಿಳಿಸಿದ್ದಾರೆ.

ಬಿಗಿ ಭದ್ರತೆ: ಹೋಳಿ ಆಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಕ್ಷಿಪ್ರ ಕಾರ್ಯ ಪಡೆ (ಆರ್​ಎಎಫ್), ಸಿಆರ್​ಪಿಎಫ್, ಸಿಎಆರ್ ಸೇರಿ ಸಾವಿರಾರು ಸಿಬ್ಬಂದಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಕಮರಿಪೇಟ ವ್ಯಾಪ್ತಿಯ ವಿವಿಧೆಡೆ ಸಿಆರ್​ಪಿಸಿ ಕಲಂ ಅನ್ವಯ 144 ಜಾರಿಗೊಳಿಸಲಾಗಿತ್ತು. ಸಾರ್ವಜನಿಕರ ಆಹ್ವಾನದ ಮೇರೆಗೆ ಹಲವು ಪೊಲೀಸ್ ಸಿಬ್ಬಂದಿ ಕೂಡ ಬಣ್ಣದಾಟ ಆಡುವ ಮೂಲಕ ಸಂಭ್ರಮಿಸಿದರು.