ಜಿಲ್ಲೆ

ಕರೊನಾಕ್ಕೆ ಇಬ್ಬರು ಸಾವು

ಕಲಬುರಗಿ: ಸೋಮವಾರದ ಆರೋಗ್ಯ ಇಲಾಖೆ ಬುಲೆಟಿನ್ನಲ್ಲಿ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಪ್ರಮಾಣದಲ್ಲಿ ಇಳಿಕೆ ಮತ್ತು ಚೇತರಿಸಿಕೊಂಡವರ ಸಂಖ್ಯೆಯಲ್ಲಿ ಏರಿಕೆ ಕಂಡಿರುವುದು ತುಸು ಸಮಾಧಾನ ತಂದಿದೆ. ಸೋಮವಾರ 176 ಜನರಿಗೆ ಕರೊನಾ ಪಾಸಿಟಿವ್ ಪತ್ತೆಯಾದರೆ, ಈವರೆಗಿನ ಸೋಂಕಿತರ ಸಂಖ್ಯೆ 10318. 225 ಜನರು ಚೇತರಿಸಿಕೊಂಡಿದ್ದಾರೆ. ಒಟ್ಟು ಬಿಡುಗಡೆಯಾದವರ ಸಂಖ್ಯೆ 8355. ಸಕ್ರಿಯ ಪ್ರಕರಣ 1773 ಇವೆ. ಇಂದು ಇಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಒಟ್ಟು ಮೃತರ ಸಂಖ್ಯೆ 192ಕ್ಕೆ ಏರಿದೆ.
ಐಸಿಯುದಲ್ಲಿ 30 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸದಾಗಿ ಪತ್ತೆಯಾಗಿರುವ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ತೀವ್ರ ಉಸಿರಾಟ ತೊಂದರೆ ಜತೆಗೆ ಮಧುಮೇಹದಿಂದ ಬಳಲುತ್ತಿದ್ದ ಕಮಲಾಪುರ ತಾಲೂಕಿನ ಕೆರೆ ಅಂಬಲಗಾದ 65 ವರ್ಷದ ವೃದ್ಧ (ಪಿ-209607) 16ರಂದು ಆಸ್ಪತ್ರೆಗೆ ದಾಖಲಾಗಿ 18ರಂದು ಮೃತಪಟ್ಟಿದ್ದರು. ತೀವ್ರ ಉಸಿರಾಟ ತೊಂದರೆಯಿಂದ ಬಳಲುತಿದ್ದ ಚಿತ್ತಾಪುರ ತಾಲೂಕಿನ ವಾಡಿ ಸೇವಾಲಾಲ್ ನಗರದ 58 ವರ್ಷದ ಮಹಿಳೆ (ಪಿ-272435) ಆ.19ರಂದು ಸ್ವಗೃಹದಲ್ಲಿ ನಿಧನರಾದರು ಎಂದು ಜಿಲ್ಲಧಿಕಾರಿ ಶರತ್ ಬಿ ತಿಳಿಸಿದ್ದಾರೆ.
ಕರೊನಾ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನಸಂಪರ್ಕ ಕಚೇರಿಯಿಂದ ನಗರದಲ್ಲಿ ಆಗಸ್ಟ್ 28ರವರೆಗೆ ಕರೊನಾ ವೈರಸ್ ಕುರಿತು ಆಟೋ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಸೋಮವಾರ ಚಾಲನೆ ನೀಡಿದರು.
ಈ ಜಾಗೃತಿ ಕಾರ್ಯಕ್ರಮವನ್ನು ಸೋಮವಾರ ನಗರದಲ್ಲಿ, ಮಂಗಳವಾರ ಖಣದಾಳ, ಸಿರನೂರ, ಕಾಳನೂರ. 26 ರಂದು ಸರಡಗಿ, ಹಾಗರಗಿ ಮತ್ತು ಮಾಲಗತ್ತಿ, 27ರಂದು ಉದನೂರ, ಹೀರಾಪೂರ, ಸ್ಟೇಷನ್ ಬಬಲಾದ್ ಹಾಗೂ 28ರಂದು ಕೋಟನೂರ, ಡಬರಾಬಾದ್, ಸಿಂದಗಿಗಳಲ್ಲಿ ಆಟೋ ಮೂಲಕ ಕರೊನಾ ವೈರಸ್ ಕುರಿತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಚೇರಿ ಸಹಾಯಕ ನಾಗಪ್ಪ ಅಂಬಾಗೋಳ ಇತರರಿದ್ದರು.