ಜಿಲ್ಲೆ

ಕರೊನಾ ಹೆಸರಲ್ಲಿ ಲೂಟಿ ಆರೋಪ

Dharwad

ಹುಬ್ಬಳ್ಳಿ: ಕರೊನಾ ಹೆಸರಲ್ಲಿ ರಾಜ್ಯ ಸರ್ಕಾರ ಭಾರಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಇಂದಿರಾ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ಸದಸ್ಯರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಮಹಾಮಾರಿ ಕರೊನಾ ನಿಯಂತ್ರಿಸಬೇಕಾದ ಸರ್ಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ. ಪಿಪಿಇ ಕಿಟ್ ಖರೀದಿಯಿಂದ ಹಿಡಿದು ಪ್ರತಿಯೊಂದರಲ್ಲೂ ಸಾರ್ವಜನಿಕರ ಹಣ ಕೊಳ್ಳೆ ಹೊಡೆಯುತ್ತಿದೆ. ಸೋಂಕಿತ ಒಬ್ಬ ವ್ಯಕ್ತಿಗೆ 14 ದಿನಗಳ ಕಾಲ ಕ್ವಾರಂಟೈನ್​ಗೆ ಸರ್ಕಾರ 3,50,000 ರೂ. ಖರ್ಚು ಮಾಡಿದೆ. 300 ರೂ. ಪಿಪಿಇ ಕಿಟ್​ಗೆ 1444ರಿಂದ 2049 ರೂ. ಕೊಟ್ಟು ಖರೀದಿಸಿದೆ. ಆ ಮೂಲಕ ಅಂದಾಜು 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ಮಾಡಿದೆ. ಈ ಕುರಿತು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮೂಲಕ ಯಡಿಯೂರಪ್ಪ ಸರ್ಕಾರದ ರೈತ ವಿರೋಧಿ ನೀತಿ ಬಹಿರಂಗವಾಗಿದೆ. 25 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವವರೂ ಕೃಷಿ ಭೂಮಿ ಖರೀದಿಸಬಹುದಾಗಿದೆ. ಇದರಿಂದ ಬಡ ರೈತರು ಬೀದಿ ಪಾಲಾಗಲಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದಲೂ ರೈತರಿಗೆ ಮೋಸವಾಗಲಿದೆ. ಇದು ವ್ಯಾಪಾರಿಗಳು ಮತ್ತು ಕಾಪೋರೇಟ್ ಕಂಪನಿಗಳಿಗೆ ನೆರವಾಗಲಿದೆ. ಈ ಕೂಡಲೆ ಇಂತಹ ತಿದ್ದುಪಡಿಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಹುಡಾ ಮಾಜಿ ಅಧ್ಯಕ್ಷ ಅನ್ವರ ಮುಧೋಳ, ಪಾಲಿಕೆ ಮಾಜಿ ಸದಸ್ಯ ಅಲ್ತಾಫ ಕಿತ್ತೂರ, ರಜತ ಉಳ್ಳಾಗಡ್ಡಿಮಠ, ಎ.ಎ. ಜೋಡಗೇರಿ, ಪ್ರಶಾಂತ ವಾಲಿ, ಶಫಿ ನವಲೂರ, ಬಾಬಾಜಾನ ಮುಧೋಳ, ಇಮಾಮಖಾನ್ ಎಸ್., ಮತ್ತಿತರರು ಇದ್ದರು.

ಜನ ವಿರೋಧಿ ನೀತಿಗೆ ಖಂಡನೆ

ಧಾರವಾಡ: ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ರಾಜ್ಯದ ಜನ ಸಂಕಷ್ಟದಲ್ಲಿದ್ದರೂ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಸಚಿವರು ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ.

ಇತ್ತ ಅತಿವೃಷ್ಟಿಯಿಂದ ರೈತರ ಬೆಳೆ ಹಾನಿಯಾಗಿವೆ. ಆದಾಗ್ಯೂ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಇವುಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದನ್ನು ಬಿಟ್ಟು ಜನವಿರೋಧಿ ನೀತಿಗಳನ್ನು ಜಾರಿಗೆ ತರುವಲ್ಲೇ ಸರ್ಕಾರಗಳು ಕಾಲಹರಣ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.

ನಂತರ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ರವಾನಿಸಿದರು. ಮಹಾನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಮಾಜಿ ಸಂಸದ ಪೊ›. ಐ.ಜಿ. ಸನದಿ, ಶಾಕಿರ್ ಸನದಿ, ಮುಖಂಡರಾದ ಎಫ್.ಎಚ್. ಜಕ್ಕಪ್ಪನವರ, ಬಸವರಾಜ ಮಲಕಾರಿ, ಪಿ.ಎಚ್. ನೀರಲಕೇರಿ, ಸದಾನಂದ ಡಂಗನವರ, ಶಿವಶಂಕರ ಹಂಪಣ್ಣವರ, ಅನಿಲಕುಮಾರ ಪಾಟೀಲ, ಇಸ್ಮಾಯಿಲ್ ತಮಟಗಾರ, ರಾಬರ್ಟ ದದ್ದಾಪುರಿ, ವಸಂತ ಅರ್ಕಾಚಾರ, ಆನಂದ ಸಿಂಗನಾಥ, ಪ್ರಕಾಶ ಕ್ಯಾರಕಟ್ಟಿ, ಸ್ವಾತಿ ಮಾಳಗಿ, ಬಂಗಾರೇಶ ಹಿರೇಮಠ, ಪಾರಸಮಲ್ ಜೈನ್, ಇತರರು ಇದ್ದರು.