ಜಿಲ್ಲೆ

ಕರೊನಾ ಸ್ವಯಂ ಸೇವಕರ ಪಡೆ ಅಸ್ತಿತ್ವಕ್ಕೆ

ಬಾಬುರಾವ ಯಡ್ರಾಮಿ ಕಲಬುರಗಿ: ಕರೊನಾ ಅಟ್ಟಹಾಸಕ್ಕೆ ಮಟ್ಟ ಹಾಕಲು ಜಿಲ್ಲಾಡಳಿತ ಜತೆಗೆ ಪೊಲೀಸರು ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಪೊಲೀಸರ ಜತೆ ಈ ಕೆಲಸಕ್ಕೆ ಸಾರ್ವಜನಿಕರ ಸಾಥ್ ಪಡೆಯಲು ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 50 ಜನರ ವಿಶೇಷ `ಕರೊನಾ ಸ್ವಯಂ ಸೇವಕರ ಪಡೆ' ಅಸ್ತಿತ್ವಕ್ಕೆ ತರಲಾಗುತ್ತಿದೆ.
ಕರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಆರೋಗ್ಯ ತಪಾಸಣೆಗೆ ಹೋಗುತ್ತಿರುವ ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರ ಕರ್ತವ್ಯಕ್ಕೆ ಅಡ್ಡಿ, ಅವರ ಮೇಲೆ ಹಲ್ಲೆ ನಡೆಯದಂತೆ ನೋಡಿಕೊಳ್ಳಲು ಆಯಾ ಬಡಾವಣೆ ಜನರ ಸಹಭಾಗಿತ್ವವ ಪಡೆಯುವುದು ಈ ಪಡೆ ರಚನೆ ಮೂಲ ಉದ್ದೇಶ.
ನಗರ ಪೊಲೀಸ್ ಆಯುಕ್ತಾಲಯ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಈ ಪ್ರಯೋಗ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಈಗಾಗಲೇ ಪೊಲೀಸ್ ಕಮೀಷನರ್ ಎನ್.ಸತೀಶಕುಮಾರ್ ಸೂಚನೆಯಂತೆ ಆಯುಕ್ತಾಲಯ ವ್ಯಾಪ್ತಿಯ 14 ಠಾಣೆಗಳ ಪೈಕಿ ಸಂಚಾರ ಮತ್ತು ವಿಶೇಷ ಠಾಣೆಗಳನ್ನು ಹೊರತುಪಡಿಸಿ ಉಳಿದ 10 ಠಾಣೆ ವ್ಯಾಪ್ತಿಯಲ್ಲಿ ಸ್ವಯಂ ಸೇವಕರ ಪಡೆಗಳನ್ನು ರಚಿಸುವ ಕೆಲಸ ಚುರುಕಾಗಿ ನಡೆದಿದೆ. ಈಗಾಗಲೇ ಕೆಲ ಠಾಣೆಗಳಲ್ಲಿ ಪಡೆ ರಚಿಸಿ ಸಭೆ ಮೂಲಕ ಸಲಹೆ, ತಿಳಿವಳಿಕೆ ನೀಡಲಾಗಿದೆ.
ಠಾಣೆ ವ್ಯಾಪ್ತಿ ಬಡಾವಣೆಗಳಲ್ಲಿನ ಆಸಕ್ತರು, ಸಮಾಜದ ಹಿತ ಬಯಸುವಂಥ ಯುವಕರು ಮತ್ತು ಸಾರ್ವಜನಿಕರನ್ನು ಕರೊನಾ ಸ್ವಯಂ ಸೇವಕರು ಎಂದು ಆಯ್ಕೆ ಮಾಡಿ ತಂಡ ರಚಿಸಲಾಗಿದೆ. ಕೆಲ ಸುತ್ತಿನ ಸಭೆ ನಡೆಸಿ ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನು ವಿಶ್ವವಿದ್ಯಾಲಯ ಠಾಣೆ ಇನ್ಸ್ಪೆಕ್ಟರ್ ಸಂಗಮನಾಥ ಹಿರೇಮಠ, ಅಶೋಕ ನಗರ ಇನ್ಸ್ಪೆಕ್ಟರ್ ಪಂಡಿತ ಸಗರ, ಸ್ಟೇಷನ್ ಬಜಾರ ಇನ್ಸ್ಪೆಕ್ಟರ್ ಎಲ್.ಎಚ್. ಗೌಂಡಿ, ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಸೋಮಲಿಂಗ ಕಿರದಳ್ಳಿ, ಚೌಕ್ ಇನ್ಸ್ಪೆಕ್ಟರ್ ಶಕೀಲ್ ಅಂಗಡಿ, ಬ್ರಹ್ಮಪುರ ಪಿಐ ಕಪಿಲ್ದೇವ್, ಆರ್.ಜಿ. ನಗರ ಇನ್ಸ್ಪೆಕ್ಟರ್ ಅರುಣಕುಮಾರ ಮೊದಲಾದವರು ಕೋವಿಡ್-19 ಸ್ವಯಂ ಸೇವಕರ ಪಡೆ ಸದಸ್ಯರಿಗೆ ತಿಳಿಹೇಳಿದ್ದು, ಕೆಲಸ ಆರಂಭಿಸಿದ್ದಾರೆ. ಆರೋಗ್ಯ ಕೆಲಸಗಳಿಗೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 50 ಜನರ ಕೋವಿಡ್-19 ಸ್ವಯಂ ಸೇವಕರ ಪಡೆ ರಚಿಸಲಾಗಿದೆ. ಈ ತಂಡ ಕರೊನಾ ಕುರಿತ ಜನಜಾಗೃತಿ ಕೆಲಸಗಳಲ್ಲಿ ಆಶಾ, ಅಂಗನವಾಡಿ ಮತ್ತು ಅರೋಗ್ಯ ಕಾರ್ಯಕರ್ತರ ಜತೆ ಕೆಲಸ ಮಾಡಲಿದೆ. ಜತೆಗೆ ಪೊಲೀಸರು ಸಹ ಇರಲಿದ್ದಾರೆ. ಅವರಿಗೆ ಅಯಾ ಠಾಣೆಯಿಂದ ಗುರುತಿನ ಚೀಟಿ ನೀಡಲಾಗುತ್ತದೆ. ಕರೊನಾ ಮುಗಿಯುವವರೆಗೂ ಪೊಲೀಸರೊಂದಿಗೆ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಲಿದ್ದಾರೆ.
| ಎನ್.ಸತೀಶಕುಮಾರ್ ನಗರ ಪೊಲೀಸ್ ಆಯುಕ್ತ