ಜಿಲ್ಲೆ

ಕರೊನಾ ಸೋಂಕು ನಿಯಂತ್ರಣಕ್ಕೆ ಕೇರ್ ಸೆಂಟರ್

ಚಿಕ್ಕಬಳ್ಳಾಪುರ: ಕರೊನಾ ಸೋಂಕು ನಿಯಂತ್ರಣದ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ದೊರೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಕರೊನಾ ಕೇರ್ ಸೆಂಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ತೀವ್ರ ಅನಾರೋಗ್ಯ ಸಮಸ್ಯೆ ಕಂಡು ಬರುವ ಸೋಂಕಿತರಿಗೆ ಕರೊನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ. ವ್ಯಾಪಕವಾಗಿ ಸೋಂಕು ಪತ್ತೆಯಾಗುತ್ತಿದ್ದರೂ ಬಹುತೇಕರಲ್ಲಿ ತೀವ್ರ ಸಮಸ್ಯೆಗಳು ಕಂಡು ಬರದಿರುವುದು ಸಮಾಧಾನಕರ ವಿಚಾರ ಎಂದರು.

ವ್ಯಾಪಕವಾಗಿ ಸೋಂಕು ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಇತರ ಕಾಯಿಲೆಗಳನ್ನು ಹೊಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ವೃದ್ಧರು, ಮಕ್ಕಳು ಮತ್ತು ರೋಗಿಗಳು ಹೊರಗಡೆ ಓಡಾಡಬಾರದು. ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಆರತಿ ಆನಂದ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ಪೌರಾಯುಕ್ತ ಲೋಹಿತ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮತ್ತಿತರರು ಇದ್ದರು.

ಚಿತಾಗಾರ ನಿರ್ಮಾಣಕ್ಕೆ ಭೂಮಿಪೂಜೆ : ಚಿಕ್ಕಬಳ್ಳಾಪುರ ಕೈಗಾರಿಕಾ ಪ್ರದೇಶ ಸಮೀಪದ ರುದ್ರಭೂಮಿಯಲ್ಲಿ 2 ಕೋಟಿ ರೂ ವೆಚ್ಚದ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಸಚಿವರು ಚಾಲನೆ ನೀಡಿದರು. ಮುಖ್ಯಮಂತ್ರಿಗಳ ವಿಶೇಷ ನಿಧಿಯಲ್ಲಿ 2 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಂಗಟ್ಟ ಕೆರೆಗೆ ಭೇಟಿ : ಎಚ್.ಎನ್.ವ್ಯಾಲಿ ಯೋಜನೆಯಡಿ ನೀರು ಪೂರೈಕೆಯಾಗುತ್ತಿರುವ ತಾಲೂಕಿನ ಅಂಗಟ್ಟ ಕೆರೆಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು. ಈಗಾಗಲೇ ಕಂದವಾರ ಕೆರೆಗೆ ನೀರು ಹರಿದು ಬಂದಿರುವುದರಿಂದ ಸುತ್ತಲು ಅಂತರ್ಜಲಮಟ್ಟ ಹೆಚ್ಚಾಗುತ್ತಿದೆ. ಆದಷ್ಟು ಬೇಗ ಉಳಿದ ಕೆರೆಗಳು ನೀರಿನಿಂದ ತುಂಬಲಿವೆ ಎಂದು ತಿಳಿಸಿದರು.