ಜಿಲ್ಲೆ

ಕರೊನಾ ಸೋಂಕು ತಡೆಗೆ ಅರಿವೇ ಗುರು

ತುಮಕೂರು: ಕರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಿದ್ದು ಜಿಲ್ಲಾಡತದಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.

ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಕರೊನಾ ತಡೆಗಟ್ಟಲು ಅರಿವು ಬಹುಮುಖ್ಯ. ಅರಿವಿರುವ ಯಾವುದೇ ವ್ಯಕ್ತಿ ಕರೊನಾಗೆ ಹೆದರುವಂತಿಲ್ಲ. ಅರಿವಿನಿಂದ ಹೆಜ್ಜೆ ಇಟ್ಟರೆ ಇಂತಹ ಸೋಂಕು ತಡೆಗಟ್ಟಲು ಮುಂದಾಗಬಹುದು. ಹಾಗಾಗಿ ಬಸವಣ್ಣನವರ ಅರಿವೇ ಗುರು ಎಂಬ ವಚನ ಪ್ರಸ್ತುತವೆನಿಸಿದೆ ಎಂದು ಅಭಿಪ್ರಾಯಪಟ್ಟರು.

ಉಪವಿಭಾಗಾಧಿಕಾರಿ ಅಜಯ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ್ ಇತರರಿದ್ದರು.

ಕಾಂಗ್ರೆಸ್ ಕಚೇರಿಯಲ್ಲಿ ಆಚರಣೆ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಯಂತಿ ಆಚರಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ರುದ್ರೇಶ್, ಪ್ರಧಾನ ಕಾರ್ಯದರ್ಶಿ ನ್ಯಾತೇಗೌಡ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸುಮುಖ್ ಕೊಂಡವಾಡಿ, ಮುಖಂಡರಾದ ಸೋಮಶೇಖರ್, ಸತೀಶ್, ನಿಖಿಲ್, ನೂರ್ ಅಹಮ್ಮದ್, ಸಲ್ಮಾನ್ ಇತರರಿದ್ದರು.

ಜೆಡಿಎಸ್ ಕಚೇರಿಯಲ್ಲಿ ಜನತಾ ದಾಸೋಹ: ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬೇಡವೆಂದ ಬಸವಣ್ಣನ ಜಯಂತಿ ದಿನವೇ ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸರಳವಾಗಿ ಜಯಂತಿ ಆಚರಿಸಿ ಜನತಾ ದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿದರು. ಬಸವಣ್ಣನವರು ಅಂದು ಹೇಳಿದ ಸಾಮಾಜಿಕ ಅಂತರದ ಹಿನ್ನೆಲೆಯೇ ಬೇರೆ, ಆದರೆ ಈಗ ಕರೊನಾ ಸೋಂಕಿನ ಹಿನ್ನೆಲೆ ವಿಪರೀತ ಪರೀಕ್ಷೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎಂದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜೆಡಿಎಸ್ ನಗರಾಧ್ಯಕ್ಷ ಬೆಳ್ಳಿ ಲೋಕೇಶ್, ಪಾಲಿಕೆ ಸದಸ್ಯ ಧರಣೇಂದ್ರಕುಮಾರ್, ಮಾಜಿ ಸದಸ್ಯ ಪ್ರೆಸ್ ರಾಜಣ್ಣ, ನರಸೇಗೌಡ, ಕುಂಭಣ್ಣ, ಗಂಗಣ್ಣ, ಹಿರೇಹಳ್ಳಿ ಮಹೇಶ್, ಉಪ್ಪಾರಹಳ್ಳಿ ಕುಮಾರ್ ಇತರರಿದ್ದರು.

ಸ್ಪಷ್ಟೀಕರಣಕ್ಕೆ ಒತ್ತು ನೀಡಿದ ಭಕ್ತಿಭಂಡಾರಿ: ಧಾರ್ಮಿಕ ವಿಚಾರಗಳ ಶುದ್ಧೀಕರಣ ಹಾಗೂ ಸ್ಪಷ್ಟೀಕರಣ ಕಾರ್ಯಗಳಿಗೆ ಒತ್ತು ನೀಡಿದ ಭಕ್ತಿಭಂಡಾರಿ ಬಸವಣ್ಣ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಆಶ್ರಮದಲ್ಲಿ ಸರಳವಾಗಿ ಜಯಂತಿ ಆಚರಿಸಿ ಮಾತನಾಡಿದ ಸ್ವಾಮೀಜಿ, ಬಸವಣ್ಣನವರ ವಚನಗಳು ನಮ್ಮ ಸಾಮಾನ್ಯ ಬದುಕನ್ನು ಮಹಿಮೆಯತ್ತ ಕೊಂಡೊಯ್ಯುತ್ತದೆ. ಜನರಿಗೆ ಅವರ ಆಡುಭಾಷೆಯಲ್ಲೇ ತಿಳಿವಳಿಕೆ ನೀಡುವಲ್ಲಿ ಯಶಸ್ವಿಯಾಗಿವೆ. ವೇದಾಂತ ತತ್ತ್ವವು ಅತ್ಯಂತ ಸರಳವಾಗಿ ವಚನಗಳಲ್ಲಿ ಪ್ರತಿಫಲನಗೊಂಡಿದೆ ಎಂದರು. ಬಸವಣ್ಣ ನೀಡಿದ ಕ್ರಾಂತಿಕಾರಿ ಚಿಂತನೆಗಳು ಸಮಾಜಕ್ಕೆ ದಾರಿದೀಪ. ಆದರೆ, ಅವರು ಅನುಗ್ರಹಿಸಿದ ಆಧ್ಯಾತ್ಮಿಕ ಸತ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಗಳು ಇನ್ನೂ ವೃದ್ಧಿಸಬೇಕಿದೆ.

ಸಂದರ್ಭೋಚಿತವಾಗಿ ನೀಡಿದ ಕೆಲವಷ್ಟು ಸಲಹೆಗಳು ಇಂದು ’ಶಾಶ್ವತ ಸಂದೇಶ’ವೋ ಎಂಬಂತೆ ಬಿಂಬಿತವಾಗುತ್ತಿರುವುದು ಅಪಾಯಕರ ಸಂಗತಿ. ಬಸವಣ್ಣ ಅದ್ಭುತ ಆಧ್ಯಾತ್ಮಿಕ ಕೃಷಿಕ, ಶ್ರೇಷ್ಠ ಸಾಮಾಜಿಕ ಚಿಕಿತ್ಸಕ ಎಂಬುದು ನಿರ್ವಿವಾದ ಎಂದರು.