???????????????????????????????????? 
ಜಿಲ್ಲೆ

ಕರೊನಾ ಸೋಂಕಿತರ ಪರದಾಟ

ಬೀದರ್: ಕರೊನಾ ವೈರಸ್ ಮತ್ತೆ ಹೆಚ್ಚುತ್ತಿದ್ದು, ಪಾಸಿಟಿವ್ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇಂಥ ಸಮಯದಲ್ಲಿ ಸರ್ವ ರೀತಿಯಲ್ಲಿ ಸನ್ನದ್ಧವಾಗಿರಬೇಕಿದ್ದ ಬ್ರಿಮ್ಸ್ ಅವ್ಯವಸ್ಥೆ ಆಗರವಾಗಿದೆ. ಮೂಲಸೌಲಭ್ಯ ಸಿಗದ ಕಾರಣ ಸೋಂಕಿತರು ಪರದಾಡಬೇಕಾಗಿದೆ.

ಬ್ರಿಮ್ಸ್ ಹಳೇ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗಾಗಿ ಐಸೋಲೇಷನ್ ವಾಡ್೯ ಇದೆ. ಮುಂಚೆ ಇಲ್ಲಿನ ಸೋಂಕಿತರಿಗೆ ಉತ್ತಮ ಚಿಕಿತ್ಸೆ, ಸೌಲಭ್ಯ ಕಲ್ಪಿಸಲಾಗಿತ್ತು. ಆದರೀಗ ಶೌಚಗೃಹ, ಕುಡಿಯುವ ನೀರು, ಸ್ನಾನಕ್ಕೆ ಬಿಸಿ ನೀರು ಸೇರಿ ವಿವಿಧ ಸೌಲಭ್ಯಗಳು ಸಿಗದೆ ಸೋಂಕಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವೈದ್ಯರು ಸಹ ಸಮರ್ಪಕವಾಗಿ ವಾಡ್೯ ಗೆ ಬಾರದ್ದರಿಂದ ಚಿಕಿತ್ಸೆ ಅಭಾವ ಎದುರಾಗಿದೆ. ಈ ಬಗ್ಗೆ ಸೋಂಕಿತರು ಫೋನ್ ಮಾಡಿ ಗೋಳು ತೋಡಿಕೊಂಡಿದ್ದಾರೆ.

ಕರೊನಾ ಪ್ರಭಾವ ಕಮ್ಮಿಯಾದ ನಂತರ ನಗರದಲ್ಲಿ ಸ್ಥಾಪಿಸಿದ್ದ ಎಲ್ಲ ಖಾಸಗಿ ಕೋವಿಡ್ ಆಸ್ಪತ್ರೆಗಳು ಬಂದ್ ಆಗಿವೆ. ಪ್ರಸ್ತುತ ಸೋಂಕಿತರ ಚಿಕಿತ್ಸೆಗೆ ಏಕೈಕ ದಾರಿ ಬ್ರಿಮ್ಸ್. ಆದರೆ ಇಲ್ಲಿ ಸೌಲಭ್ಯಗಳ ಕೊರತೆ ಇದೆ. ಶೌಚಗೃಹಗಳು ಗಬ್ಬು ನಾರುತ್ತಿವೆ. ಒಳಗೆ ನೀರಿನ ವ್ಯವಸ್ಥೆಯಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ವಾಡ್೯ ನಲ್ಲಿಲ್ಲ. ಬೆಳಗ್ಗೆ ಸ್ನಾನಕ್ಕೆ ಬಿಸಿ ನೀರು ಇಲ್ಲ. ಔಷಧ ಸಹ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಈ ಬಗ್ಗೆ ಯಾರಿಗೆ ಹೇಳಬೇಕು ಎಂದು ಐದು ದಿನದಿಂದ ಚಿಕಿತ್ಸೆಗೆ ದಾಖಲಾಗಿರುವ ಸಾಮಾಜಿಕ ಚಿಂತಕ ಭಗುಸಿಂಗ್ ಜಾಧವ್ ಅಳಲು ತೋಡಿಕೊಂಡಿದ್ದಾರೆ.

ಎರಡು ವಾರಗಳಿಂದ ಪಾಸಿಟಿವ್ ಪ್ರಕರಣಗಳಲ್ಲಿ ದಿಢೀರ್ ಹೆಚ್ಚಾಗಿದೆ. ಶನಿವಾರದವರೆಗೆ ಸೋಂಕಿತರ ಸಂಖ್ಯೆ 96ಕ್ಕೇರಿದೆ. ಹೀಗಾಗಿ ಬ್ರಿಮ್ಸ್ ನ ಐಸೋಲೇಷನ್ ವಾಡ್೯ ನಲ್ಲಿ ಸಮರ್ಪಕ ಸೌಲಭ್ಯ ಕಲ್ಪಿಸಲು ಸಚಿವರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಸೋಂಕಿತರ ಒತ್ತಾಯವಾಗಿದೆ.

ಮತ್ತೆ 13 ಪಾಸಿಟಿವ್
ಭಾನುವಾರ 13 ಜನರಿಗೆ ಸೋಂಕು ತಗಲಿದೆ. ಐದು ದಿನಗಳಿಂದ ನಿರಂತರ ಎರಡಂಕಿಯಲ್ಲಿ ಪಾಸಿಟಿವ್ ಕೇಸ್ ಬರುತ್ತಿವೆ. ಮಾ.3ರಂದು 12, 4ರಂದು 13, 5ರಂದು 22, 6ರಂದು 24 ಪಾಸಿಟಿವ್ ಬಂದರೆ, ಭಾನುವಾರ 13 ಪಾಸಿಟಿವ್ ಕೇಸ್ ಬಂದಿವೆ. ಈ ಐದು ದಿನಗಳಲ್ಲಿ 84 ಜನರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ.

ಬ್ರಿಮ್ಸ್ ನಲ್ಲಿ ಕರೊನಾ ಸೋಂಕಿತರಿಗೆ ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಬಗ್ಗೆ ಕೆಲವರು ನನಗೂ ಫೋನ್ ಮಾಡಿ ಗಮನಕ್ಕೆ ತಂದಿದ್ದಾರೆ. ಸೂಕ್ತ ಸೌಲಭ್ಯ, ಸಮರ್ಪಕ ಚಿಕಿತ್ಸೆ ಒದಗಿಸುವಂತೆ ಬ್ರಿಮ್ಸ್ ನಿರ್ದೇಶಕರು, ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿರುವೆ. ಶೀಘ್ರ ಬ್ರಿಮ್ಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸುವೆ.| ಪ್ರಭು ಚವ್ಹಾಣ್ಜಿಲ್ಲಾ ಉಸ್ತುವಾರಿ ಸಚಿವ