ತುಮಕೂರು : ಕರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರೇ ಹಿಂಜರಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜೀವದ ಹಂಗುತೊರೆದು ಈ ಕಾಯಕದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಯುವಕರ ಪಡೆ ಜಿಲ್ಲಾಕೇಂದ್ರದಲ್ಲಿ ತೊಡಗಿಕೊಂಡಿದೆ.
ಬಜರಂಗದಳದ ಸಂಚಾಲಕ ಮಂಜುಭಾರ್ಗವ್ ನೇತೃತ್ವದ 8 ಯುವಕರ ಪಡೆ ಸದ್ದುಗದ್ದಲವಿಲ್ಲದೆ ನಗರದಲ್ಲಿ ಖಾಸಗಿ, ಜಿಲ್ಲಾ ಆಸ್ಪತ್ರೆಯಲ್ಲಿ ಕರೊನಾ ಸೋಂಕಿನಿಂದ ಮೃತಪಡುವರ ಅಂತ್ಯಕ್ರಿಯೆ ನೇರವೇರಿಸುತ್ತಿದೆ. ಮಕ್ಕಳು, ಹೆತ್ತವರು, ಸಂಬಂಧಿಕರೇ ಸೋಂಕಿತ ಮೃತರ ಅಂತಿಮ ಸಂಸ್ಕಾರ ಮಾಡಲು ಹಿಂದೇಟು ಹಾಕುತ್ತಿದ್ದು, ಯುವಕರ ತಂಡ ಯಾವುದೇ ಹಣ ಪಡೆಯದೆ ಈ ಕಾರ್ಯದಲ್ಲಿ ನಿರತವಾಗಿದೆ.
ಜನತಾಕರ್ಫ್ಯೂ ಜಾರಿಯಾದ ಬಳಿಕ ಸಮಾಜಮುಖಿ ಸೇವೆಯಲ್ಲಿ ಅರ್ಪಿಸಿಕೊಂಡಿರುವ ವಿಎಚ್‌ಪಿ ಹಾಗೂ ಬಜರಂಗದಳ ಯುವ ಪಡೆ ಅಂತ್ಯಕ್ರಿಯೆಗೂ ಹಣ ಒದಗಿಸಲಾಗದವರ ನೆರವಿಗೆ ನಿಂತಿದೆ. ಪಿಪಿಇ ಕಿಟ್, ಮೃತರ ದೇಹ ಮುಚ್ಚುವ ಬಾಡಿಕಿಟ್ ಅನ್ನು ಜಿಲ್ಲಾ ಆಸ್ಪತ್ರೆ ಮೂಲಕ ಹೊಂದಿಸಿಕೊಂಡು ಕುಟುಂಬಸ್ಥರಿಗೆ ಯಾವುದೇ ಆರ್ಥಿಕ ಹೊರೆಯಾಗದಂತೆ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಖಾಸಗಿ ಆಸ್ಪತ್ರೆಗಳ ದಂಧೆ: ಕರೊನಾ ನೆಪ ಮುಂದಿಟ್ಟುಕೊಂಡು ಅಂತ್ಯಸಂಸ್ಕಾರದಲ್ಲೂ ಹಣಪೀಕುವ ಕೆಲವು ಖಾಸಗಿ ಆಸ್ಪತ್ರೆಗಳ ದಂಧೆಗೆ ಕಡಿವಾಣ ಹಾಕಲು ಬಜರಂಗದಳ ಯುವ ಪಡೆಯು ಉಚಿತವಾಗಿ ಅಂತ್ಯಸಂಸ್ಕಾರ ನೇರವೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಕರೊನಾ ಸೇನಾನಿಗಳಾಗಿ ಸೇವೆ: ಜಿಲ್ಲೆಯಲ್ಲಿ ವಿಎಚ್‌ಪಿ, ಬಜರಂಗದಳದ ಕಾರ್ಯಕರ್ತರು ಕರೊನಾ ಸೇನಾನಿಗಳಾಗಿ ಮಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿದ್ದಾರೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದರಿಂದ ಹಿಡಿದು ಹೋಂ ಐಸೋಲೇಷನ್‌ನಲ್ಲಿರುವ ಅಶಕ್ತರ ಮನೆಬಾಗಿಲಿಗೆ ಔಷಧ, ಆಹಾರ ಕಿಟ್‌ಗಳನ್ನು ಪೂರೈಸುವಲ್ಲಿಯೂ ಈ ಪಡೆ ನಿರತವಾಗಿದೆ. ಅಂಗವಿಕಲರು, ಅಂಧರ ಮನೆಬಾಗಿಲಿಗೆ ದಿನಸಿ, ತರಕಾರಿಗಳನ್ನು ಸಹ ಕಾರ್ಯಕರ್ತರು ತಲುಪಿಸುವ ಸಮಾಜಮುಖಿ ಕಾರ್ಯ ಸದ್ದಿಲ್ಲದೆ ಜಿಲ್ಲೆಯಲ್ಲಿ ನಡೆಯುತ್ತಿದೆ. ನೆರವಿಗಾಗಿ ಮೊ:8095668985 ಸಂಪರ್ಕಿಸಬಹುದು.
ಕರೊನಾ ಸೋಂಕಿತರ ಅಂತ್ಯಸಂಸ್ಕಾರಕ್ಕೆ 15 ರಿಂದ 20 ಸಾವಿರ ರೂಪಾಯಿಯನ್ನು ಕೆಲವರು ಪಡೆಯುತ್ತಿದ್ದು ಕಡುಬಡವರಿಗೆ ಹಣ ಒದಗಿಸಲಾಗದೆ ಕಣ್ಣೀರುಡುವಂತಾಗಿದೆ. ಇಂತವರ ನೆರವಿಗೆ ನಿಲ್ಲಲು ವಿಎಚ್‌ಪಿ, ಬಜರಂಗದಳ ಮುಂದಾಗಿದೆ. ಮಂಜುಭಾರ್ಗವ್ ಸಂಚಾಲಕ, ಬಜರಂಗದಳ