ಜಿಲ್ಲೆ

ಕರೊನಾ ಸೋಂಕಿತ ಬಾಲಕನ ಆರೋಗ್ಯ ಸ್ಥಿರ

ತುಮಕೂರು: ಕರೊನಾ ಸೋಂಕಿಗೆ ತುತ್ತಾಗಿರುವ 13 ವರ್ಷದ ಬಾಲಕನ ಆರೋಗ್ಯ ಸ್ಥಿರವಾಗಿದೆ. ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕರೊನಾ ಸೋಂಕಿನಿಂದ ಮೃತಪಟ್ಟ ಶಿರಾ ಮೂಲದ ವೃದ್ಧನ 13 ವರ್ಷದ ಮಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾನೆ.

ಇನ್ನು ಬಾಲಕನ ತಾಯಿಯನ್ನೂ ಸಹ ಇಂದಿರಾಗಾಂಧಿ ಆಸ್ಪತ್ರೆ ಪಕ್ಕದಲ್ಲೇ ಐಸೋಲೇಷನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣ ಆತನ 2ನೇ ಪತ್ನಿಯ ರಕ್ತ ಹಾಗೂ ಗಂಟಲು ಸ್ರಾವದ ಮಾದರಿ ಪರೀಕ್ಷೆ ವರದಿ ನೆಗಟಿವ್ ಬಂದಿದೆ. ಕರೊನಾ ಸಂಬಂಧಿಸಿದ ರೋಗಲಕ್ಷಣಗಳು ಇಲ್ಲದಿದ್ದರೂ ಮುಂಜಾಗ್ರತ ಕ್ರಮವಾಗಿ ಐಸೋಲೇಷನ್ ವಾರ್ಡ್ ನಲ್ಲೇ ಇರಿಸಲಾಗಿದೆ.

28 ದಿನ ಕ್ವಾರಂಟೈನ್‌ನಲ್ಲಿ !: ಸೋಂಕು ತಗುಲಿರುವ ಬಾಲಕನ ಆರೋಗ್ಯ ಸ್ಥಿರವಾಗಿದ್ದು ಆತ ಚೇತರಿಸಿಕೊಂಡ ಬಳಿಕ ಮತ್ತೆ 2 ಬಾರಿ ಪರೀಕ್ಷೆಗೊಳಪಡಿಸಲಾಗುವುದು. ಈ ಸಂದರ್ಭದಲ್ಲಿ ಕರೊನಾ ನೆಗಟಿವ್ ವರದಿ ಬಂದ ನಂತರವೇ ಆತನನ್ನು ಡಿಸ್‌ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಂಗಳವಾರ ಮಾಹಿತಿ ನೀಡಿದರು.

ಬಾಲಕನ ತಾಯಿಗೆ ಕರೊನಾ ಸೋಂಕಿಲ್ಲದೇ ಇರುವುದು ದೃಢಪಟ್ಟಿದ್ದರು. ಆತನ ಹಾಗೂ ಮೃತಪಟ್ಟ ವೃದ್ಧನ ಜತೆ ನಿಕಟ ಸಂಪರ್ಕದಲ್ಲಿದ್ದ ಕಾರಣ ಅವರನ್ನು ಶಿರಾ ಎಂಸಿಎಚ್ ಆಸ್ಪತ್ರೆಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಅವರು 14 ದಿನ ಕ್ವಾರಂಟೈನ್ ಅವಧಿ ಪೂರ್ಣಗೊಳಿಸದ ಬಳಿಕ ಮತ್ತೊಮ್ಮೆ ಪರೀಕ್ಷೆಗೆ ಗುರಿಪಡಿಸಿ ಆ ವರದಿ ನೋಡಿಕೊಂಡು ಮನೆಗೆ ತೆರಳಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಕರೊನಾ ಜಾಗೃತಿ ವಾಹಿನಿಗೆ ಚಾಲನೆ: ಕರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರಿಗೆ ಅರಿವು ಮೂಡಿಸಲು ಹಮ್ಮಿಕೊಂಡಿರುವ ಪ್ರಚಾರ ವಾಹಿನಿ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಂಗಳವಾರ ಚಾಲನೆ ನೀಡಿದರು. ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಭಾರತೀಯ ರೆಡ್‌ಕ್ರಾಸ್ ಸೊಸೈಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಕೇಶ್ ಕುಮಾರ್, ಜಿಲ್ಲೆಯ ಎಲ್ಲ ತಾಲೂಕು ಹಾಗೂ ಕಾರ್ಮಿಕ ವಲಯಗಳಲ್ಲಿ ಜಾಗೃತಿ ವಾಹನ ಸಂಚರಿಸಿ ಕರೊನಾ ವೈರಸ್ ಸೋಂಕು ತಡೆಯುವ ಬಗ್ಗೆ ಪ್ರಚಾರ ಮಾಡುವ ಮೂಲಕ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಉಪನಿರ್ದೇಶಕ ಪಾರ್ಥಸಾರಥಿ, ಕಾರ್ಮಿಕ ಅಧಿಕಾರಿ ಸುಭಾಷ್ ಎಂ.ಆಲದಕಟ್ಟಿ, ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಸಾಗರನಹಳ್ಳಿ ಪ್ರಭು ಇದ್ದರು.

ತಿಪಟೂರಿನ 11 ಜನರಿಗೂ ಸೋಂಕಿಲ್ಲ!: ಮಾ.17 ರಂದು ತಿಪಟೂರಿಗೆ ತೆರಳಿದ್ದ ಮೃತವೃದ್ಧ ಅಲ್ಲಿ ಕೆಲವರನ್ನು ಭೇಟಿಯಾಗಿದ್ದ, ಈ 11 ಜನರ ರಕ್ತ ಹಾಗೂ ಗಂಟಲು ಸ್ರಾವವನ್ನು ಪ್ರಯೋಗಲಾಯಕ್ಕೆ ಕಳುಹಿಸಲಾಗಿತ್ತು. ಈಗ ವರದಿ ಬಂದಿದ್ದು ಯಾರಲ್ಲೂ ಕರೊನಾ ಸೋಂಕಿಲ್ಲವೆಂಬ ಅಂಶ ಬೆಳಕಿಗೆ ಬಂದಿದೆ. ಕರೊನಾ ನೆಗಟಿವ್ ಬಂದಿದ್ದು ಇವರನ್ನು ಅಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿ ಇರಿಸಲಾಗಿದೆ. 14 ದಿನ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಬಳಿಕ ಅವರನ್ನು ಮನೆಗಳಿಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದರು.