ಜಿಲ್ಲೆ

ಕರೊನಾ ಸೋಂಕು ತಡೆಗೆ ಜಾಗೃತಿ ಅಗತ್ಯ

ಗದಗ: ಕೋವಿಡ್-19 ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ತಾಲೂಕು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಗರದ ಹಳೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಗುರುವಾರ ಮಾಸ್ಕ್ ದಿನ ಆಚರಿಸಲಾಯಿತು.

ಮಾಸ್ಕ್ ದಿನದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಜಿಪಂ ಅಧ್ಯಕ್ಷೆ ಮಲ್ಲವ್ವ ಬಿಚ್ಚೂರ ಹಾಗೂ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಜಂಟಿಯಾಗಿ ಚಾಲನೆ ನೀಡಿದರು.

ರಾಜ್ಯ ಸರ್ಕಾರ ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜೂ. 18ರಂದು ಮಾಸ್ಕ್ ದಿನವನ್ನಾಗಿ ಆಚರಿಸುತ್ತಿದೆ. ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಲು ‘ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಅಲ್ಲದೆ, ಕೈಗಳಿಗೆ ಸ್ಯಾನಿಟೈಸರ್ ಹಚ್ಚಬೇಕು. ಸೋಪಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವ ಮೂಲಕ ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸಬೇಕು. ಕರೊನಾ ಬಗ್ಗೆ ಯಾರು ಭಯಭೀತರಾಗಬಾರದು. ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೇ ಸುದ್ದಿಗಳ ಕುರಿತು ಸತ್ಯಾಂಶ ತಿಳಿಯಬೇಕು. ಸಂಶಯವಿದ್ದಲ್ಲಿ ಕೋವಿಡ್-19 ಸಹಾಯವಾಣಿಯನ್ನು ಸಂರ್ಪಸಬೇಕು ಎಂಬ ಮಾಹಿತಿಗಳನ್ನು ಧ್ವನಿವರ್ಧಕದ ಮೂಲಕ ಜಾಥಾದಲ್ಲಿ ಅರಿವು ಮೂಡಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗೆರೆ, ತಾಪಂ ಅಧ್ಯಕ್ಷ ಎಸ್.ಎಸ್. ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್., ಜಿಪಂ ಸಿಇಒ ಡಾ. ಆನಂದ ಕೆ., ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿಎಚ್​ಒ ಡಾ. ಸತೀಶ ಬಸರೀಗಿಡದ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿ.ಸಿ. ಕರಿಗೌಡ್ರ, ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಸ್. ನೀಲಗುಂದ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ರಾಜೇಂದ್ರ ಬಸರೀಗಿಡದ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಬಿ.ಎಂ. ಗೊಜನೂರ, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ನರೇಗಲ್ಲನಲ್ಲಿ ಪಾದಯಾತ್ರೆ ಮೂಲಕ ಅರಿವು

ನರೇಗಲ್ಲ: ಮಹಾಮಾರಿ ಕರೊನಾ ವೈರಸ್ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದೆ. ಜನರು ಜಾಗರೂಕರಾಗಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಸ್ಥಳೀಯ ಪಟ್ಟಣ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಪೊಲೀಸ್ ಇಲಾಖೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಮಾಸ್ಕ್ ದಿನಾಚರಣೆ ಹಾಗೂ ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್-19 ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಸರ್ಕಾರದೊಂದಿಗೆ ಸಾರ್ವಜನಿಕರು ಕೈ ಜೋಡಿಸುವ ಮೂಲಕ ಕರೊನಾ ತೊಲಗಿಸಲು ಮುಂದಾಗಬೇಕು ಪ.ಪಂ. ಕಾರ್ಯಾಲಯದಿಂದ ಆರಂಭವಾದ ಜನಜಾಗೃತಿ ಪಾದಯಾತ್ರೆ ಪಟ್ಟಣದ ಪ್ರಮುಖ ರಸ್ತೆ, ಓಣಿಗಳ ಬೀದಿಗಳಲ್ಲಿ ಸಾಗಿತು. ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಎ.ಡಿ. ಸಾಮುದ್ರಿ, ಪಿಎಸ್​ಐ ಬಿ.ಬಿ. ಕೊಳ್ಳಿ, ಪ.ಪಂ. ಕಿರಿಯ ಆರೋಗ್ಯ ಸಹಾಯಕ ರಾಮಚಂದ್ರ ಕಜ್ಜಿ, ಎಸ್.ಎಫ್. ಅಂಗಡಿ, ಎಸ್.ಎನ್. ಪಾಟೀಲ, ಅಶೋಕ ಹೊಸಳ್ಳಿ, ಆರೀಫ್ ಮಿರ್ಜಾ, ಮುತ್ತುರಾಜ್ ಹೂಗಾರ ಇತರರಿದ್ದರು.

ಜನರಲ್ಲಿ ಮಾಸ್ಕ್ ಬಳಕೆಯ ಪ್ರಮಾಣ ಮತ್ತಷ್ಟು ಏರಿಕೆಯಾಗಲಿ ಎನ್ನುವ ಸದುದ್ದೇಶದಿಂದ ಮಾಸ್ಕ್ ದಿನ ಹಮ್ಮಿಕೊಳ್ಳಲಾಗಿದೆ. ಕೋವಿಡ್-19 ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮಾಸ್ಕ್ ಬಳಕೆ ಅತೀ ಮುಖ್ಯವಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಮಾಸ್ಕ್ ದಿನಾಚರಣೆ ಜಾರಿಗೆ ತರಲಾಗಿದೆ. | ಎಸ್.ವಿ. ಸಂಕನೂರ ವಿಧಾನ ಪರಿಷತ್ ಸದಸ್ಯ

ಕರೊನಾ ರೋಗಕ್ಕಿಲ್ಲ ನಿರ್ಧಿಷ್ಟ ಔಷಧ

ಲಕ್ಷ್ಮೇಶ್ವರ: ಕರೊನಾ ಮಹಾಮಾರಿ ತಡೆಯಲು ಇದುವರೆಗೂ ನಿರ್ದಿಷ್ಟ ಔಷಧ ಲಭ್ಯವಾಗದ್ದರಿಂದ ಮುಂಜಾಗ್ರತೆ ವಹಿಸುವುದೇ ಸೂಕ್ತ ಮದ್ದಾಗಿದೆ ಎಂದು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಹೇಳಿದರು. ಪಟ್ಟಣದ ಪುರಸಭೆ ಆವರಣದಲ್ಲಿ ಕಂದಾಯ, ಪುರಸಭೆ, ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡ ಮಾಸ್ಕ್ ದಿನದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಿದರೆ ಮಾತ್ರ ಅಪಾಯ ತಡೆಯಬಹುದಾಗಿದೆ ಎಂದರು. ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ಆರೋಗ್ಯಾಧಿಕಾರಿ ಗಿರೀಶ ಮರಡ್ಡಿ, ಎಪಿಎಂಸಿ ಕಾರ್ಯದರ್ಶಿ ಎನ್.ಎ. ಲಕ್ಕುಂಡಿ, ಕಂದಾಯ ನಿರೀಕ್ಷಕ ಎಸ್.ಎಸ್. ಪಾಟೀಲ, ಆನಂದ ಬದಿ, ಮಂಜು ಮುದಗಲ್, ಬಿ.ಎಸ್. ಬಳಗಾನೂರ, ಪ್ರಕಾಶ ಕರ್ಜಗಿ, ಪ್ರಕಾಶ ಕಿತ್ತೂರ, ವಿ.ಜೆ. ಬಾರಕೇರ, ಆರೋಗ್ಯ, ಕಂದಾಯ, ಪುರಸಭೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮಾಸ್ಕ್ ದಿನದ ಅಂಗವಾಗಿ ಹಮ್ಮಿಕೊಂಡ ಜನಜಾಗೃತಿ ಜಾಥಾ ಪಟ್ಟಣದ ಮುಖ್ಯ ಬಜಾರ್ ರಸ್ತೆಯಲ್ಲಿ ಸಾಗಿ ಮಾಸ್ಕ್ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.