ಜಿಲ್ಲೆ

ಕರೊನಾ ಸೋಂಕಿನಿಂದ ಗುಣವಾದ ಮಹಿಳೆ

ಗದಗ: ಕೋವಿಡ್ 19 ಸೋಂಕಿತ ಮಹಿಳೆ (ಪಿ 1567) ಗುಣ ಹೊಂದಿ ಶುಕ್ರವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಕರೊನಾ ವೈರಸ್ ಸೋಂಕಿನಿಂದ ಗುಣ ಹೊಂದಿದ ಮಹಿಳೆಗೆ ವೈದ್ಯರು ಮತ್ತು ಸಿಬ್ಬಂದಿ ಚಪ್ಪಾಳೆ ತಟ್ಟಿ ಗೌರವಿಸಿ ಮನೆಗೆ ಕಳುಹಿಸಿಕೊಟ್ಟರು.

ನಗರದ ನಿವಾಸಿ 35 ವರ್ಷದ ಮಹಿಳೆ (ಪಿ 1567) ಛತ್ತೀಸ್​ಗಢದಿಂದ ಮೇ 21ರಂದು ಆಗಮಿಸಿದ್ದರು. ಅದೇ ದಿನ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್್ಸ) ಪ್ರಯೋಗಾಲಯದಲ್ಲಿ ಅವರ ಗಂಟಲ ದ್ರವ ಮಾದರಿ ಪರೀಕ್ಷೆ ನಡೆಸಲಾಗಿತ್ತು. ಆಗ ಸೋಂಕು ಇರುವುದು ದೃಢಪಟ್ಟಿತ್ತು. ಕಳೆದ 8 ದಿನಗಳಿಂದ ಚಿಕಿತ್ಸೆ ನೀಡಿದ ಬಳಿಕ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿತು. ಮೇ 29ರಂದು ಅವರ ಗಂಟಲ ದ್ರವವನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದಾಗ ವರದಿಯಲ್ಲಿ ಕರೊನಾ ವೈರಸ್ ಸೋಂಕು ನೆಗೆಟಿವ್ ಬಂದಿದೆ. ಹೀಗಾಗಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ. ಮುಂದಿನ 14 ದಿನಗಳ ಕಾಲ ಬಿಡುಗಡೆಗೊಂಡ ವ್ಯಕ್ತಿಯನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗುವುದು ಎಂದು ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ವಿವರಿಸಿದರು.

ಜಿಲ್ಲೆಯಲ್ಲಿ ಒಟ್ಟು 35 ಸೋಂಕಿತರ ಪೈಕಿ 23 ಸಕ್ರಿಯ ಕೇಸ್​ಗಳಿದ್ದು, ಒಬ್ಬರು ಮೃತಪಟ್ಟಿದ್ದಾರೆ. 11 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಕರೊನಾ ಸೇನಾನಿಗಳಿಗೆ ಸನ್ಮಾನ ಇಂದು

ಲಕ್ಷ್ಮೇಶ್ವರ: ಕರೊನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕರೊನಾ ಸೇನಾನಿಗಳಿಗೆ ಪಟ್ಟಣದ ಚನ್ನಮ್ಮನ ವನ ಕಲ್ಯಾಣಮಂಟಪದಲ್ಲಿ ಮೇ 30ರಂದು ಬೆಳಗ್ಗೆ 11 ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರೊನಾ ಹೆಮ್ಮಾರಿ ವಿರುದ್ಧದ ಹೋರಾಟದಲ್ಲಿ ಆರೋಗ್ಯ, ಪೊಲೀಸ್ ಇಲಾಖೆ, ಪುರಸಭೆ ಸಿಬ್ಬಂದಿ, ಪೌರಕಾರ್ವಿುಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸೇನಾನಿಗಳಂತೆ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಈ ವೇಳೆ ಎಂ.ಎಸ್. ದೊಡ್ಡಗೌಡರ, ಎಂ. ಸಿದ್ದಲಿಂಗಯ್ಯ, ರಾಜಣ್ಣ ಕುಂಬಿ, ಫಕೀರೇಶ ಮ್ಯಾಟಣ್ಣವರ, ತಿಪ್ಪಣ್ಣ ಸಂಶಿ, ನಾರಾಯಣಸಾ ಪವಾರ, ಕಿರಣ ನವಲೆ, ಎಸ್.ಎಸ್. ಪಾಟೀಲ, ಸೋಮನಗೌಡ್ರ ಪಾಟೀಲ (ಯಲಿಬಳ್ಳಿ), ಬಸವರಡ್ಡಿ ಹನುಮರಡ್ಡಿ, ಶಿವಯೋಗಪ್ಪ ಚಂದರಗಿ ಇತರರಿದ್ದರು.

ಫಾಗಿಂಗ್ ಕಾರ್ಯಕ್ಕೆ ಚಾಲನೆ

ಬೆಳವಣಿಕಿ(ತಾ.ರೋಣ): ಬೆಳವಣಿಕಿ ಗ್ರಾಮ ಪಂಚಾಯತಿಗೆ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ತಮ್ಮ ಅನುದಾನದಲ್ಲಿ ಡೆಂಘ ಮತ್ತು ಮಲೇರಿಯಾ ಸೊಳ್ಳೆಗಳನ್ನು ನಿಯಂತ್ರಿಸುವ ಫಾಗಿಂಗ್ ಯಂತ್ರ ನೀಡಿದ್ದಾರೆ.

ಗ್ರಾಮದ ಬಸ್ ನಿಲ್ದಾಣದ ಬಳಿ ಫಾಗಿಂಗ್ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀನಿವಾಸ ಮಾನೆ, ಗ್ರಾಮದ ಪ್ರತಿಯೊಬ್ಬರೂ ಡೆಂಘ ಹಾಗೂ ಮಲೇರಿಯಾ ರೋಗ ಬರದಂತೆ ಎಚ್ಚರಿಕೆ ವಹಿಸಬೇಕು. ತಮ್ಮ ಮನೆಯ ಸುತ್ತಮುತ್ತಲಿನ ಸ್ಥಳವನ್ನು ಸ್ವಚ್ಛಗೊಳಿಸಬೇಕು ಎಂದು ಹೇಳಿದರು.

ಮಾಜಿ ಶಾಸಕ ಬಿ. ಆರ್.ಯಾವಗಲ್, ಹೊಳೆಆಲೂರು ಬ್ಲಾಕ್ ಕಮಿಟಿ ಅಧ್ಯಕ್ಷ ಮಲ್ಲಣ್ಣ ಕೊಳ್ಳೇರಿ, ನರಗುಂದ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಪ್ರವೀಣ ಯಾವಗಲ್, ಗ್ರಾ.ಪಂ. ಅಧ್ಯಕ್ಷ ಹನುಮಂತಪ್ಪ ಸೈದಾಪೂರ, ಉಪಾಧ್ಯಕ್ಷೆ ರತ್ನವ್ವ ಹೊಂಬಳ, ಗ್ರಾ.ಪಂ ಸದಸ್ಯರಾದ ಪ್ರಭುಗೌಡ ಪಾಟೀಲ, ಶಿವಪ್ಪ ಹಾಲಭಾವಿ, ಬಸವರಾಜ ಮಂತೂರ, ನಾಗರತ್ನ ನಂದಿ, ದೇವೇಂದ್ರಪ್ಪ ಕೊಳ್ಳಪ್ಪನವರ, ಗುರುಪಾದಪ್ಪ ಕುರಹಟ್ಟಿ, ಈರಪ್ಪ ತಾಳಿ ಮತ್ತಿತರರು ಇದ್ದರು.

3 ಸಾವಿರ ಮಾಸ್ಕ್ ವಿತರಣೆ

ಲಕ್ಷ್ಮೇಶ್ವರ: ಪಟ್ಟಣದ ವ್ಯಾಪಾರಸ್ಥರ ಸಂಘದ ವತಿಯಿಂದ ಶುಕ್ರವಾರ ಪಟ್ಟಣಕ್ಕೆ ಸಂತೆಗಾಗಿ ಬಂದ ಗ್ರಾಮೀಣ ಪ್ರದೇಶಗಳ ಜನರು, ಪೌರ ಕಾರ್ವಿುಕರು, ಬಸ್ ಚಾಲಕ/ನಿರ್ವಾಹಕರು ಸೇರಿ 3 ಸಾವಿರ ಜನರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು.

ಈ ವೇಳೆ ಮಾತನಾಡಿದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ, ‘ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದ ವ್ಯಾಪಾರಸ್ಥರರು ತಾಲೂಕಾಡಳಿತ ಮತ್ತು ಪುರಸಭೆಯವರು ಸೂಚಿಸಿದ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇವೆ. ಜನರೂ ಸಹಕಾರ ನೀಡಿದ್ದಾರೆ. ಮಾಸ್ಕ್ ಧರಿಸುವುದು, ಅಂತರ ಕಾಯುವುದನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದರು.

ಪಿಎಸ್​ಐ ಶಿವಯೋಗಿ ಲೋಹಾರ, ಮುಖ್ಯಾಧಿಕಾರಿ ಆರ್.ಎಂ. ಪಾಟೀಲ ಮಾಸ್ಕ್ ವಿತರಣೆಗೆ ಚಾಲನೆ ನೀಡಿದರು. ವ್ಯಾಪಾರಸ್ಥರಾದ ಅಶೋಕ ಬಟಗುರ್ಕಿ, ಮಾಲತೇಶ ಅಗಡಿ, ಧರ್ಮಚಂದ ಮುಥಾ, ಆದೇಶ ಬರಿಗಾಲಿ, ವೈಭವ ಗೋಗಿ, ಶಕ್ತಿ ಕತ್ತಿ, ಗಂಗಾಧರ ಪುರಾಣಿಕಮಠ, ವಿಶ್ವನಾಥ ಬಾಳೇಹಳ್ಳಿಮಠ, ಮಂಜುನಾಥ ಸವಣೂರ, ಪರಮೇಶ ತೆಗ್ಗೆಳ್ಳಿ, ಗಂಗಾಧರ ಶಿರಹಟ್ಟಿ ಇದ್ದರು.

EndFragment