ಜಿಲ್ಲೆ

ಕರೊನಾ ಸೋಂಕಿನ ಭೀತಿ ಖಾಸಗಿ ಕ್ಲಿನಿಕ್, ಔಷಧ ಅಂಗಡಿ ಬಂದ್

ರೋಣ: ಕರೊನಾ ಸೋಂಕಿನ ಭೀತಿ ಹೆಚ್ಚುತ್ತಿದ್ದಂತೆ ತಾಲೂಕಿನಾದ್ಯಂತ ಖಾಸಗಿ ವೈದ್ಯರು ನಡೆಸುತ್ತಿದ್ದ ಕ್ಲಿನಿಕ್​ಗಳು ಬಾಗಿಲು ಮುಚ್ಚಿದ್ದು, ಇದರಿಂದಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರು ಚಿಕಿತ್ಸೆಗಾಗಿ ಅಲೆದಾಡುವ ಪರಿಸ್ಥಿತಿ ನಿರ್ವಣವಾಗಿದೆ.

ಕರೊನಾ ಸಾಂಕ್ರಾಮಿಕ ಸೋಂಕಿನ ಭೀತಿಯ ಜೊತೆಗೆ ಲಾಕ್​ಡೌನ್ ಪರಿಣಾಮ ಗ್ರಾಮೀಣ ಭಾಗಗಳಿಗೆ ಭೇಟಿ ನೀಡುತ್ತಿದ್ದ ಖಾಸಗಿ ವೈದ್ಯರು ಈಗ ಮನೆ ಬಿಟ್ಟು ಹೊರಗೆ ಹೆಜ್ಜೆ ಇಡುತ್ತಿಲ್ಲ. ಇನ್ನು ನಗರ ಪ್ರದೇಶಗಳಲ್ಲಿಯೂ ಇದೇ ಪರಿಸ್ಥಿತಿ ಕಂಡು ಬರುತ್ತಿದೆ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ಜನರು ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ, ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಗಂಭೀರ ಸ್ವರೂಪದ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಕೆಮ್ಮು, ನೆಗಡಿ, ಜ್ವರ, ತಲೆ ನೋವಿನಂತೆ ಸಣ್ಣ ಪುಟ್ಟ ತೊಂದರೆಯಿಂದ ನರಳುವವರಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ಅದರಲ್ಲೂ ಬಿಪಿ, ಶುಗರ್​ನಂಥ ಕಾಯಿಲೆಯಿಂದ ಬಳಲುತ್ತ ಖಾಸಗಿ ವೈದ್ಯರ ಬಳಿ ನಿರಂತರವಾಗಿ ತಪಾಸಣೆ ಮಾಡಿಕೊಳ್ಳುತ್ತಿದ್ದವರ ಪರಿಸ್ಥಿತಿ ಹೇಳತೀರದಾಗಿದೆ. ಅಲ್ಲದೆ, ಅನಾರೋಗ್ಯದಿಂದ ಬಳಲುವವರು ಅನಿವಾರ್ಯವಾಗಿ ಸ್ಥಳೀಯ ಔಷಧ ಅಂಗಡಿಗಳಿಗೆ ಹೋಗಿ ಅವರಿಂದಲೇ ಸಲಹೆ ಪಡೆದು ಮಳಿಗೆಯಲ್ಲಿ ದೊರೆಯುವ ಮಾತ್ರೆಗಳನ್ನು ಸೇವಿಸಿ ತಾತ್ಕಾಲಿಕವಾಗಿ ರೋಗ ಉಪಶಮನದ ಮಾರ್ಗ ಕಂಡುಕೊಳ್ಳುತ್ತಿದ್ದಾರೆ.

ಸಾಮಾನ್ಯ ಕೆಮ್ಮು, ನೆಗಡಿ, ಜ್ವರ ಬಂದಿದೆ ಎಂದು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಹೋದರೆ, ಅಲ್ಲಿನ ವೈದ್ಯರು ಅವರನ್ನು ಗದಗ ಜಿಮ್್ಸ ಆಸ್ಪತ್ರೆಗೆ ಕಳುಹಿಸಿಕೊಡುತ್ತಾರೆ. ಹೀಗಾಗಿ, ಸಾಮಾನ್ಯ ಜನರು ಖಾಸಗಿ ವೈದ್ಯರಿಲ್ಲದಕ್ಕೆ ಸರ್ಕಾರಿ ಆಸ್ಪತ್ರೆಗೆ ಹೋಗದೆ ಔಷಧ ಅಂಗಡಿಗಳ ಮೊರೆ ಹೋಗುತ್ತಿದ್ದಾರೆ. | ಮಲ್ಲಯ್ಯ ಮಹಾಪುರುಷಮಠ, ಪುರಸಭೆ ಸದಸ್ಯ ರೋಣ
ನನಗೆ ಬಿಪಿ, ಶುಗರ್ ಎರಡು ಇದೆ, ವಾರಕ್ಕೊಮ್ಮೆ ಎಸ್​ಡಿಎಂಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದೆ. ವೈದ್ಯರ ಸಲಹೆ ಮೇರೆಗೆ ಮಾತ್ರ ಹಾಗೂ ಆಹಾರದ ಕ್ರಮ ಬದಲಿಸಿಕೊಳ್ಳುತ್ತಿದ್ದೆ. ಇತ್ತೀಚೆಗೆ ಮನೆಯಿಂದ ಹೊರಗೆ ಕಾಲಿಡಲು ಆಗುತ್ತಿಲ್ಲ. ಹೀಗಾಗಿ, ಏನು ಮಾಡಬೇಕು ಎನ್ನುವುದು ತೋಚುತ್ತಿಲ್ಲ.| ಬಸಮ್ಮ ಬಡಿಗೇರ ರೋಣ ನಿವಾಸಿ