ಧಾರವಾಡ: ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, 318 ಜನರಲ್ಲಿ ಸೋಂಕು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 13340ಕ್ಕೆ ಏರಿದೆ. ಇದುವರೆಗೆ 10502 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2450 ಪ್ರಕರಣಗಳು ಸಕ್ರಿಯವಾಗಿವೆ. 68 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ 388 ಜನ ಮೃತಪಟ್ಟಿದ್ದಾರೆ.
ಧಾರವಾಡ ನಗರ ಹಾಗೂ ಗ್ರಾಮೀಣ ತಾಲೂಕು ಸೇರಿ 69 ಕಡೆಗಳಲ್ಲಿ; ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲೂಕು ಸೇರಿ 63 ಪ್ರದೇಶದಲ್ಲಿ ಸೋಂಕು ಪತ್ತೆಯಾಗಿದೆ. ಕಲಘಟಗಿ ತಾಲೂಕಿನ ಕಾಮಧೇನು, ಹುಲಿಕಟ್ಟಿ, ಬೀರವಳ್ಳಿ, ಮಿಶ್ರಿಕೋಟಿ, ಎಮ್ಮೆಟ್ಟಿ; ನವಲಗುಂದ ತಾಲೂಕಿನ ಗೊಬ್ಬರಗುಂಪಿ, ತಳವಾರ ಓಣಿ, ತಿರ್ಲಾಪುರ, ದೇಸಾಯಿಪೇಟೆ, ಶಲವಡಿ, ಅಳಗವಾಡಿ, ಶಿರಕೋಳ, ಗೌಡರ ಓಣಿ; ಕುಂದಗೋಳ ತಾಲೂಕಿನ ಕಾಳಿದಾಸ ನಗರ, ದ್ಯಾಮವ್ವನ ಗುಡಿ ಓಣಿ, ಇಂಗಳಹಳ್ಳಿ, ಕೆಇಬಿ ಎದುರು, ಹಿರೇಹರಕುರಣಿ ಮ್ಯಾಗೇರಿ ಓಣಿ, ಸಂಶಿ; ಅಣ್ಣಿಗೇರಿ ತಾಲೂಕಿನ ರೈಲ್ವೆ ನಿಲ್ದಾಣ, ಹೊಸಪೇಟೆ ಓಣಿ, ಪದ್ಮಾವತಿ ದೇವಾಲಯ ಬಳಿ ಪ್ರಕರಣಗಳು ಪತ್ತೆಯಾಗಿವೆ.
ಅನ್ಯ ಜಿಲ್ಲೆಗಳ ಹತ್ತಕ್ಕಿಂತ ಹೆಚ್ಚು ಜನರು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಕಾಡಿಬೇಡಿ ಪಡೆಯಬೇಕು ಆಕ್ಸಿಜನ್
ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಇದರಲ್ಲಿ ತೀವ್ರ ಉಸಿರಾಟದ ಸಮಸ್ಯೆ ಇರುವವರಿಗೆ ಆಕ್ಸಿಜನ್ ಪೂರೈಸದಿದ್ದರೆ ಬದುಕುವುದೇ ಕಷ್ಟ. ಆದರೆ, ಆಸ್ಪತ್ರೆಗಳಿಗೆ ಪೂರೈಕೆಯಾಗಬೇಕಿದ್ದ ಆಕ್ಸಿಜನ್ ಪ್ರಮಾಣದಲ್ಲಿ ಏರಿಳಿತ ಕಂಡುಬರುತ್ತಿರುವುದು ಆತಂಕಕಾರಿಯಾಗಿದೆ.
ಧಾರವಾಡ ಜಿಲ್ಲೆಗೆ ಪ್ರತಿ ದಿನ 15 ಟನ್ ಆಕ್ಸಿಜನ್ ಅಗತ್ಯವಿದೆ. ಕೊಲ್ಲಾಪುರ ಹಾಗೂ ಬಳ್ಳಾರಿಯ ಜಿಂದಾಲ್ನಿಂದ ಕಚ್ಚಾ ಪದಾರ್ಥ ಪೂರೈಕೆಯಾಗುತ್ತದೆ. ಇದನ್ನು ಪಡೆಯುವ ಸದರ್ನ್ ಗ್ಯಾಸ್, ಕರ್ನಾಟಕ ಇಂಡಸ್ಟ್ರಿಯಲ್ ಗ್ಯಾಸ್ ಹಾಗೂ ಫ್ರಾಕ್ಸೇರ್ ಕಂಪನಿಗಳು ಶುದ್ಧೀಕರಿಸಿ ಆಕ್ಸಿಜನ್ ಪೂರೈಕೆ ಮಾಡಬೇಕು.
ಕೋವಿಡ್ ಚಿಕಿತ್ಸೆ ನೀಡಲು ಗುರುತಿಸಿದ 18 ಖಾಸಗಿ ಆಸ್ಪತ್ರೆ ಮತ್ತು ಕಿಮ್ಸ್ಗೆ ನಿತ್ಯ ಆಕ್ಸಿಜನ್ ಪೂರೈಕೆ ಆಗಲೇಬೇಕು. ಕಿಮ್ಸ್ನಲ್ಲಿ 20 ಕೆಎಲ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ಇರುವುದರಿಂದ ಸಮಸ್ಯೆ ಆಗಿಲ್ಲ. ಕೆಲ ಖಾಸಗಿ ಸಂಘ -ಸಂಸ್ಥೆಗಳು ಆಕ್ಸಿಜನ್ ಕಿಟ್ಗಳನ್ನು ಪೂರೈಕೆ ಮಾಡುತ್ತಿರುವುದೂ ಸಹಾಯವಾಗಿದೆ.
ಮೊದಲು ಕೈಗಾರಿಕೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದ ರಿಫಿಲ್ಲರ್ಗಳು ಈಗ ಆಸ್ಪತ್ರೆಗಳಿಗಷ್ಟೇ ಒದಗಿಸುತ್ತಿದ್ದರೂ ಸಮಸ್ಯೆಗೆ ಪೂರ್ಣ ಪರಿಹಾರ ಸಿಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಸಮಸ್ಯೆ
ಕರೊನಾ ಸೋಂಕಿತರು ಖಾಸಗಿ ಆಸ್ಪತ್ರೆಗಳಿಗೂ ದಾಖಲಾಗುತ್ತಿದ್ದಾರೆ. ಟ್ಯಾಂಕ್ ಹೊಂದಿಲ್ಲದ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ಕಂಡುಬರುತ್ತಿರುವುದು ಜಿಲ್ಲಾಡಳಿತದ ಗಮನಕ್ಕೂ ಬಂದಿದೆ. ಹಾಗಾಗಿ ಕೊಲ್ಲಾಪುರದಿಂದ 8 ಟನ್ ಕಚ್ಚಾ ಆಕ್ಸಿಜನ್ ತರಿಸಿಕೊಳ್ಳಲಾಗಿದೆ.
ದಿಢೀರ್ ಬಂದ ಕರೊನಾ ಸೋಂಕಿನಿಂದ ದೇಶದ ಎಲ್ಲ ನಗರದ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಕೊರತೆಗೆ ಕಾರಣವಾಗಿದೆ. ಸಮಸ್ಯೆ ನೀಗಿಸಲು ನಾಲ್ಕು ತಿಂಗಳ ಹಿಂದೆಯೇ ತಂಡ ರಚಿಸಲಾಗಿದೆ. ಆದರೂ ಅಗತ್ಯದಷ್ಟು ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಸಮಸ್ಯೆ ಪರಿಹಾರಕ್ಕೆ ತಂಡ ರಚಿಸಲಾಗಿದೆ. ಕೊಲ್ಲಾಪುರ ಮತ್ತು ಬಳ್ಳಾರಿಯಿಂದ ಆಕ್ಸಿಜನ್ ತರಿಸಿಕೊಳ್ಳಲಾಗುತ್ತಿದೆ. ಪ್ರತಿ ದಿನ ಜಿಲ್ಲೆಯಲ್ಲಿ 15 ಟನ್ ಆಕ್ಸಿಜನ್ ಬೇಡಿಕೆ ಇದೆ. ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ.-ಮಲ್ಲಿಕಾರ್ಜುನ, ಸಹಾಯಕ ಔಷಧ ನಿಯಂತ್ರಣಾಧಿಕಾರಿ ಧಾರವಾಡ