ಜಿಲ್ಲೆ

ಕರೊನಾ ಸೋಂಕಿತರ ಟ್ರಾವೆಲ್ ಹಿಸ್ಟರಿ ತನಿಖೆ ಮಾಡಿ

ಎನ್.ಆರ್.ಪುರ: ಮುಂಬಯಿಂದ ಬಂದ ಎನ್.ಆರ್.ಪುರ ತಾಲೂಕಿನ ಮೂವರಿಗೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರ ಟ್ರಾವೆಲ್ ಹಿಸ್ಟರಿ ತನಿಖೆ ಮಾಡಬೇಕು ಎಂದು ತರೀಕೆರೆ ಉಪವಿಭಾಗಾಧಿಕಾರಿ ರೇಣುಕಾಪ್ರಸಾದ್ ಅವರು ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು.

ತಾಲೂಕು ಕಚೇರಿಯಲ್ಲಿ ಬುಧವಾರ ಟಾಸ್ಕ್​ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮುಂಬೈಯಿಂದ ಬರುವಾಗ ಮಾರ್ಗಮಧ್ಯೆ ಹೋಟೆಲ್​ಗೆ ಹೋಗಿರುವ ಸಂಭವವಿದೆ. ಬೇರೆ ಯಾರದ್ದಾದರೂ ಸಂಪರ್ಕ ಇತ್ತೇ ಎಂಬುದನ್ನು ಸರ್ವೆ ಮಾಡಬೇಕು. ಅವರ ಕುಟುಂಬದವರನ್ನು ಸಂರ್ಪಸಿ ಮಾಹಿತಿ ಪಡೆಯಬೇಕು ಎಂದು ತಿಳಿಸಿದರು.

ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರುವವರನ್ನು ನೋಡಲು ಬಂದರೆ ಯಾರನ್ನೂ ಬಿಡಬಾರದು. ಅಲ್ಲಿರುವ ಸೆಕ್ಯೂರಿಟಿ, ಅಡುಗೆಯವರು, ಇತರೆ ಕಾರ್ವಿುಕರಿಗೆ ಅಗತ್ಯ ಪಾಸ್ ನೀಡಬೇಕು. ಕ್ವಾರಂಟೈನ್​ಲ್ಲಿದ್ದವರ ಫೋಟೋ ತೆಗೆದು ಕಳಿಸಬೇಕು ಎಂದರು.

ತಾಲೂಕು ವೈದ್ಯಾಧಿಕಾರಿ ಡಾ. ವೀರಪ್ರಸಾದ್ ಮಾತನಾಡಿ, ಈಗ ಕರೊನಾ ಪಾಸಿಟಿವ್ ಬಂದಿರುವ ಮೂವರ ಕುಟುಂಬದವರು ಮುಂಬಯಿಂದ ಬಂದವರು. ಎನ್.ಆರ್.ಪುರ ತಾಲೂಕಿಗೆ ಬರುವ ಮುಂಚೆಯೇ ಗೇಟ್​ನಲ್ಲಿ ತಡೆದು ಚಿಕ್ಕಮಗಳೂರಿಗೆ ಕಳಿಸಲಾಗಿತ್ತು. ನಂತರ ಅವರನ್ನು ಕೊಪ್ಪ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇಡಲಾಗಿತ್ತು. ಅವರಿಗೆ ತಾಲೂಕಿನ ಯಾರೂ ಸಂಪರ್ಕಕ್ಕೆ ಬಂದಿರಲಿಲ್ಲ. ಆದರೂ ತನಿಖೆ ಮಾಡುತ್ತಿದ್ದು, ಅವರ ಕುಟುಂಬದವರನ್ನು ಸಂರ್ಪಸಿದ್ದೇವೆ ಎಂದು ಮಾಹಿತಿ ನೀಡಿದರು.

ವಿವಾಹಕ್ಕೆ ಸ್ಥಳೀಯ ಆಡಳಿತ ಅನುಮತಿ ಅಗತ್ಯ: ಈವರೆಗೆ ಮದುವೆಗೆ ಪೊಲೀಸ್ ಇಲಾಖೆ ಅನುಮತಿ ನೀಡುತ್ತಿತ್ತು. ಇನ್ನು ಮುಂದೆ ಸರ್ಕಾರದ ಆದೇಶದಂತೆ ಪಟ್ಟಣದಲ್ಲಿ ಪಪಂ ಮುಖ್ಯಾಧಿಕಾರಿ ಹಾಗೂ ಗ್ರಾಮೀಣ ಭಾಗದಲ್ಲಿ ಪಿಡಿಒ ಅನುಮತಿ ನೀಡುತ್ತಾರೆ ಎಂದು ಎಸಿ ರೇಣುಕಾಪ್ರಸಾದ್ ತಿಳಿಸಿದರು. ಮದುವೆಗೆ 50 ಜನರಿಗೆ ಹಾಗೂ ಯಾರಾದರೂ ತೀರಿಹೋದರೆ 20 ಜನ ಸೇರಲು ಅವಕಾಶ ನೀಡಬಹುದು. ಮದುವೆಗೆ ಹೋಗುವ ವಾಹನದ ಎಲ್ಲ ದಾಖಲಾತಿ ಪಡೆದುಕೊಂಡಿರಬೇಕು. ಯಾವ ಕಾರಣಕ್ಕೂ ಭಾನುವಾರ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು. ಪ್ರತಿಯೊಬ್ಬರೂ ಮಾಸ್ಕ್ ಧರಿಸಿರಬೇಕು. ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಅನಗತ್ಯವಾಗಿ ರಸ್ತೆಯಲ್ಲಿ ಓಡಾಡಿದರೆ ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆಯಬೇಕು. ಮಾಸ್ಕ್ ಹಾಕದಿದ್ದರೆ 100 ರೂ. ದಂಡ ವಿಧಿಸಿ ಎಂದು ಸೂಚಿಸಿದರು.

ತಹಸೀಲ್ದಾರ್ ಪರಮೇಶ್, ಇಒ ಎಸ್.ನಯನಾ, ಪಪಂ ಮುಖ್ಯಾಧಿಕಾರಿ ಕುರಿಯಾಕೋಸ್, ಸಿಪಿಐ ಸುರೇಶ್, ಪಿಎಸ್​ಐ ದಿಲೀಪ್​ಕುಮಾರ್, ಆರೋಗ್ಯ ಇಲಾಖೆಯ ಬೇಬಿ, ಬಿಸಿಎಂ ಇಲಾಖೆ ಅಧಿಕಾರಿ ಧರ್ಮರಾಜ್ ಇತರರಿದ್ದರು.