ಜಿಲ್ಲೆ

ಕರೊನಾ ಸೇನಾನಿಗಳಿಗಿಲ್ಲ 7ನೇ ವೇತನ ಭಾಗ್ಯ

ಮರಿದೇವ ಹೂಗಾರ ಹುಬ್ಬಳ್ಳಿ

ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜ್​ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕರೊನಾ ಸೇನಾನಿಗಳಿಗೆ 7ನೇ ವೇತನ ಆಯೋಗದ ಭಾಗ್ಯ ಮಾತ್ರ ಸಿಗದಂತಾಗಿದೆ !

ರಾಜ್ಯದಲ್ಲಿ ಒಟ್ಟು 17 ಸರ್ಕಾರಿ ವೈದ್ಯಕೀಯ ಕಾಲೇಜ್​ಗಳಿವೆ. 10 ಸೂಪರ್ ಸ್ಪೆಷಾಲಿಟಿ ಮತ್ತು ಸ್ವಾಯತ್ತ ಸಂಸ್ಥೆಗಳಿವೆ. ಇವುಗಳಲ್ಲಿ ಸಾವಿರಾರು ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆಲ್ಲ ಏಪ್ರಿಲ್ ತಿಂಗಳಿಂದ 7ನೇ ವೇತನ ಆಯೋಗದ ವರದಿ ಅನುಸಾರ ಸಂಬಳವನ್ನೇ ನೀಡುತ್ತಿಲ್ಲ.

ವೇತನ ಆಯೋಗದಂತೆ ಒಟ್ಟು 137 ಕೋಟಿ ರೂ. ವಾರ್ಷಿಕ ಹೆಚ್ಚುವರಿ ಅನುದಾನ ಮೀಸಲಿಡಲಾಗಿದೆ. ಖಜಾನೆ-2(ಕೆ-2) ಮೂಲಕ ಸಂಬಳ ಬಟವಡೆ ಮಾಡಲು ಉದ್ದೇಶಿಸಲಾಗಿದೆ. ಎಚ್​ಆರ್​ಎಂಎಸ್ ಅಪ್ಲೋಡ್ ಮಾಡಲಾಗುತ್ತಿದೆ. ಈ ತರಹದ ತಂತ್ರಾಂಶ ಅಳವಡಿಕೆಯಿಂದಾಗಿ ಉದ್ದೇಶಿತ ಹೆಚ್ಚುವರಿ ಸಂಬಳ ಬಿಡುಗಡೆ ವಿಳಂಬವಾಗಿದೆ. ಆಯೋಗದ ವರದಿಯಂತೆ ಏಪ್ರಿಲ್ ತಿಂಗಳಿಂದಲೇ ಸಂಬಳ

ಹೆಚ್ಚಿಸಿ ಅವರವರ ಖಾತೆಗೆ ಜಮಾ ಮಾಡಬೇಕಿತ್ತು. ಆಗಸ್ಟ್ ತಿಂಗಳು ಸಮೀಪಿಸಿದರೂ ಇದುವರೆಗೆ ಈ ಪ್ರಕ್ರಿಯೆಗೆ ಚಾಲನೆ ಸಿಕ್ಕಿಲ್ಲ.

ಕೆಲ ಕಾಲೇಜ್​ಗಳಲ್ಲಿ ನೀಡಿಕೆ: 7ನೇ ವೇತನ ಆಯೋಗದ ಅನ್ವಯ ಗದಗ, ಬೆಳಗಾವಿ ಸೇರಿ ಇತರೆ ವೈದ್ಯಕೀಯ ಕಾಲೇಜ್​ಗಳ ವೈದ್ಯರಿಗೆ ಸಂಬಳ ನೀಡಲಾಗಿದೆ. ರಾಜ್ಯ ಸರ್ಕಾರ ನೀಡುವ ಅನುದಾನ ಕೆಲ ಕಾಲೇಜ್​ಗಳ ಸಿಬ್ಬಂದಿಗೆ ಸಂಬಳ ನೀಡಲಷ್ಟೇ ಸಾಧ್ಯವಾಗುತ್ತದೆ. ಹಾಗಾಗಿ ಸರ್ಕಾರದಿಂದ ಬರುವ ಅನುದಾನಕ್ಕಾಗಿ ಕಾಯುವ ಅನಿವಾರ್ಯತೆ ಕಾಲೇಜ್​ಗಳಿಗಿದೆ.

ವೈದ್ಯರ ಮನಸ್ಸಿಗೆ ಕಸಿವಿಸಿ: ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಅವರಿಗೆ ಔಷಧೋಪಚಾರ, ಚಿಕಿತ್ಸೆ ನೀಡುತ್ತಿರುವವರು ವೈದ್ಯರು. ಇವರಿಗೆ 7ನೇ ವೇತನ ಆಯೋಗದಂತೆ ಸಂಬಳ ನೀಡಿದ್ದರೆ ಇನ್ನಷ್ಟು ಖುಷಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಬಳ ನೀಡಿಕೆ ವಿಳಂಬದಿಂದ ವೈದ್ಯರ ಮನಸ್ಸಿಗೆ ಕಸಿವಿಸಿಯಾಗಿದೆ.

ಅನುದಾನ ಬಿಡುಗಡೆ ಮಾಡಿ: 7ನೇ ವೇತನ ಆಯೋಗದ ವರದಿಯಂತೆ ಹುಬ್ಬಳ್ಳಿಯ ಕಿಮ್ಸ್​ಗೆ ಹೆಚ್ಚುವರಿಯಾಗಿ 90 ಲಕ್ಷ ರೂ. ಬರಬೇಕಿದೆ. ಮೂರುವರೆ ತಿಂಗಳಾದರೂ ಹೆಚ್ಚುವರಿ ವೇತನ ಸಿಗದೇ ಇರುವುದರಿಂದ ವೈದ್ಯರಿಗೆ ನಿರಾಸೆಯಾಗಿದೆ. ಕೂಡಲೇ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.

ವೈದ್ಯರು ಭಯಪಡುವ ಅಗತ್ಯವಿಲ್ಲ. ಎಲ್ಲರಿಗೂ ಆಗಸ್ಟ್ ತಿಂಗಳಿಂದ 7ನೇ ವೇತನ ಆಯೋಗದಂತೆ ಸಂಬಳ ಕೈ ಸೇರಲಿದೆ. ಬಾಕಿ ಉಳಿದ ಹಣದಲ್ಲಿ ಕೆಲ ಕಾಲೇಜ್​ಗಳು ಸಂಬಳ ನೀಡಿರಬಹುದು.| ಡಾ. ಗಿರೀಶ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಬೆಂಗಳೂರು