ಜಿಲ್ಲೆ

ಕರೊನಾ ಸೇನಾನಿಗಳ ಸೇವೆ ಶ್ಲಾಘನೀಯ, ಶಾಸಕ ಶರತ್ ಬಚ್ಚೇಗೌಡ ಅಭಿಮತ, ಆಹಾರ ಸಾಮಗ್ರಿ ಕಿಟ್ ವಿತರಣೆ

ಹೊಸಕೋಟೆ: ತಾಲೂಕಿನಲ್ಲಿ ಕರೊನಾ ಸೇನಾನಿಗಳು ಸೋಂಕಿತರಿಗೆ ಔಷಧ ನೀಡುವ ಜತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲೂಕಿನ ಖಾಜಿಹೊಸಹಳ್ಳಿ ಹಾಗೂ ವಾಗಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಹಾರ ಸಾಮಗ್ರಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಸೋಂಕು ವ್ಯಾಪಿಸಿ ಜನತೆಯಲ್ಲಿ ಭೀತಿ ಮೂಡಿದೆ. ಇಂತಹ ಸಂದರ್ಭದಲ್ಲಿ ಕರೊನಾ ಸೇನಾನಿಗಳು ಜೀವದ ಹಂಗು ತೊರೆದು ಶ್ರಮಿಸುತ್ತಿರುವುದರಿಂದ ರೋಗ ನಿಯಂತ್ರಣಕ್ಕೆ ಬರುತ್ತಿದೆ. ಸಾರ್ವಜನಿಕರು ಕಡ್ಡಾಯವಾಗಿ ಲಸಿಕೆ ಪಡೆದು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು ಎಂದು ಸಲಹೆ ನೀಡಿದರು.

ಜಿಪಂ ಸದಸ್ಯ ಕೃಷ್ಣಮೂರ್ತಿ ಮಾತನಾಡಿ, ಕರೊನಾದಿಂದ ಹಲವು ಜನರು ಮೃತಪಟ್ಟಿದ್ದಾರೆ. ಶಾಸಕರ ಮುಂದಾಲೋಚನೆಯಿಂದ ಫೀವರ್ ಕ್ಲಿನಿಕ್ ವ್ಯವಸ್ಥೆ ಮಾಡಿದ್ದರಿಂದ ತಾಲೂಕಿನಲ್ಲಿ ಕರೊನಾ ಹತೋಟಿಗೆ ಬಂದಿದೆ ಎಂದರು.

ವಾಗಟ ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷೆ ರಾಮಮೂರ್ತಿ, ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ಮುಖಂಡರಾದ ಸುರೇಶ್ ಗೌಡ, ನರೇಂದ್ರ, ಶಿವಕುಮಾರ್, ಕೃಷ್ಣ ಮುಂತಾದವರು ಇದ್ದರು.